ವಿಜಯವಾಡ (ಆಂಧ್ರ ಪ್ರದೇಶ): ವಿವಿಧ ಆ್ಯಪ್ಗಳ ಮೂಲಕ ಆನ್‌ಲೈನ್ ಸಾಲ ತೆಗೆದುಕೊಳ್ಳುವುದು ಗ್ರಾಹಕರು ಮತ್ತಷ್ಟು ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ಯಾಕೆಂದರೆ, ಆನ್‌ಲೈನ್ ಸಾಲ ನೀಡಿ ನಂತರ ಅದಕ್ಕೆ ಹೆಚ್ಚಿನ ಬಡ್ಡಿ ಹಣ ಪಾವತಿಸುವಂತೆ ಕಿರುಕುಳ ನೀಡುವ ಪ್ರಕರಣಗಳು ಹೆಚ್ಚಾಗಿವೆ. ಇದರ ನಡುವೆ ಇದೀಗ ಗ್ರಾಹಕರ ಫೋಟೋಗಳನ್ನು ಮಾರ್ಫಿಂಗ್ ಮಾಡಿ, ಅಶ್ಲೀಲವಾಗಿ ಸೃಷ್ಟಿಸಿ ಕಿರುಕುಳ ನೀಡುವ ಕೃತ್ಯಗಳು ನಡೆಯುತ್ತಿವೆ.
ಹೌದು, ಆಂಧ್ರಪ್ರದೇಶದ ವಿಜಯವಾಡದಲ್ಲಿ ಇಂತಹ ಪ್ರಕರಣಗಳು ಬೆಳಕಿಗೆ ಬಂದಿದೆ. ಗ್ರಾಹಕರು ತೆಗೆದುಕೊಂಡ ಸಾಲಕ್ಕೆ ಒಮ್ಮೆಲೆ ಎರಡರಿಂದ ನಾಲ್ಕು ಪಟ್ಟು ಹಣ ವಸೂಲಿ ಮಾಡಲಾಗುತ್ತಿದೆ. ಅಲ್ಲದೇ, ಇದನ್ನು ಪ್ರಶ್ನಿಸಿದ ಗ್ರಾಹಕರ ಫೋಟೋಗಳನ್ನು ಮಾರ್ಫ್ ಮಾಡಿ ಅಶ್ಲೀಲ ಚಿತ್ರಗಳನ್ನು ಸೃಷ್ಟಿಸಿ ಬೆದರಿಕೆ ಹಾಕಲಾಗುತ್ತಿದೆ.
ನಾಲ್ಕು ದಿನಗಳ ಹಿಂದೆ ಕೊಂಡಪಲ್ಲಿಯ ಖಾಸಗಿ ಉದ್ಯೋಗಿಯೊಬ್ಬರು ಇದೇ ರೀತಿ ಕಿರುಕುಳಕ್ಕೆ ಒಳಗಾಗಿದ್ದರು. ಜೊತೆಗೆ ವಿಜಯವಾಡ ಜೆಎನ್‌ಎನ್‌ಯುಆರ್‌ಎಂ ವೈಎಸ್ಆರ್ ಕಾಲೋನಿಯ 25 ವರ್ಷದ ಯುವತಿಗೂ ಇದೇ ರೀತಿಯ ಕಿರುಕುಳ ನೀಡಿದ ಘಟನೆ ಬೆಳಕಿಗೆ ಬಂದಿದೆ.
76 ನಂಬರ್ಗಳಿಂದ ಬಂದ ಅಶ್ಲೀಲ ಚಿತ್ರಗಳು: ಖಾಸಗಿ ಕಂಪನಿಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿರುವ ಯುವತಿ '18 ಆನ್‌ಲೈನ್ ಲೋನ್ ಆ್ಯಪ್' ಮೂಲಕ ಹೆಚ್ಚಿನ ಬಡ್ಡಿಗೆ 55,435 ರೂ. ಪಡೆದಿದ್ದರು. ಈ ಸಾಲಕ್ಕೆ ಇಲ್ಲಿಯವರೆಗೂ 2,00,750 ರೂ. ಮರುಪಾವತಿ ಮಾಡಿಸಿದ್ದಾರೆ. ಆದರೆ, ಇನ್ನೂ ಹಣ ಕಟ್ಟಬೇಕೆಂದು ಆಕೆಗೆ ಮತ್ತೆ ಕಿರುಕುಳ ನೀಡಲು ಪ್ರಾರಂಭಿಸಲಾಗಿದೆ.
ಅಲ್ಲದೇ, ಯುವತಿ ಫೋಟೋಗಳನ್ನೇ ಕದ್ದು, ಅವುಗಳನ್ನು ಮಾರ್ಫ್ ಮಾಡಿ ಅಶ್ಲೀಲ ಚಿತ್ರಗಳನ್ನಾಗಿ ಸೃಷ್ಟಿಸಿ ಆಕೆಗೇ ಕಳುಹಿಸಲಾಗಿದೆ. ಇದೇ ರೀತಿಯಾಗಿ ಆಕೆಯ ಮೊಬೈಲ್ಗೆ 76 ವಿವಿಧ ವಾಟ್ಸ್ಆ್ಯಪ್ ನಂಬರ್ಗಳ ಮೂಲಕ ಅಶ್ಲೀಲ ಚಿತ್ರಗಳನ್ನು ಕಳುಹಿಸಲಾಗಿದೆ. ಇಷ್ಟೇ ಅಲ್ಲ, ಇತರ ನಾಲ್ಕು ನಂಬರ್ಗಳಿಂದ ಸಾಲ ತೀರಿಸುವಂತೆ ವಾಯ್ಸ್ ಮೆಸೇಜ್ ಮಾಡಲಾಗಿದೆ. ಆದ್ದರಿಂದ ಈ ಯುವತಿ ಈಗ ಸೈಬರ್ ಕ್ರೈಂ ಪೊಲೀಸರ ಮೊರೆ ಹೋಗಿದ್ದಾರೆ.
ಇದನ್ನೂ ಓದಿ: ಕೈಮೇಲೆ ಆರೋಪಿ ಹೆಸರು ಬರೆದುಕೊಂಡು, ಆತ್ಮಹತ್ಯೆಗೆ ಶರಣಾದ ಅತ್ಯಾಚಾರ ಸಂತ್ರಸ್ತೆ