ಮುಜಫ್ಫರಪುರ್: ಸುಮಾರು ಐದು ವರ್ಷಗಳ ಹಿಂದೆ ಬಿಹಾರಿನ ಮಜಫ್ಫರ್ಪುರ್ ಪ್ರದೇಶದಿಂದ ಕಣ್ಮರೆಯಾಗಿದ್ದ 21 ವರ್ಷದ ಮಹಿಳೆ ಸದ್ಯ ದೆಹಲಿಯಲ್ಲಿ ಪತ್ತೆಯಾಗಿದ್ದಾರೆ. ಈಗ ಮಹಿಳೆ ಪೊಲೀಸ್ ಇಲಾಖೆಯಲ್ಲಿ ಕಾನ್ಸ್ಟೇಬಲ್ ಹುದ್ದೆ ಸೇರಲು ದೆಹಲಿಯಲ್ಲಿ ಪೊಲೀಸ್ ಟ್ರೇನಿಂಗ್ ಪಡೆಯುತ್ತಿದ್ದಾರೆ. ಸದ್ಯ 21 ವರ್ಷದ ಮಹಿಳೆ ಆಕೆ 16 ವರ್ಷದವಳಿದ್ದಾಗ ಜೂನ್ 12, 2018 ರಂದು ಕಣ್ಮರೆಯಾಗಿದ್ದರು ಎನ್ನಲಾಗಿತ್ತು. ಆದರೆ, ಆಕೆ ಸ್ವಇಚ್ಛೆಯಿಂದ ಮನೆ ಬಿಟ್ಟು ಹೋಗಿದ್ದಳು ಎಂಬುದು ಈಗ ಬೆಳಕಿಗೆ ಬಂದಿದೆ. ಮನೆಯವರು ಆಕೆಯ ಬಾಲ್ಯವಿವಾಹ ಮಾಡಲು ತಯಾರಾಗಿದ್ದರಂತೆ. ಹಾಗಾಗಿ ಅದರಿಂದ ಪಾರಾಗಲು ಆಕೆ ಮನೆಯಿಂದ ಹೊರ ಬಂದಿದ್ದಳು.
ಬಿಹಾರ ಪೊಲೀಸರ ಪ್ರಕಾರ, ಬಾಕಿ ಉಳಿದಿರುವ ಪ್ರಕರಣಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಅರವಿಂದ್ ಕುಮಾರ್ ಅವರು ಕೇಸ್ ಅನ್ನು ರೀ ಓಪನ್ ಮಾಡಿದ್ದರು. ಆದರೆ, ನಂತರ ಕಣ್ಮರೆಯಾಗಿದ್ದ ಪ್ರಕರಣವನ್ನು ವಾಸ್ತವವನ್ನು ತಪ್ಪಾಗಿ ಬಿಂಬಿಸಲಾಗಿದೆ ಎಂಬ ಆಧಾರದ ಹಿನ್ನೆಲೆ ಈ ಕೇಸ್ ಅನ್ನು ಕ್ಲೋಸ್ ಮಾಡಲಾಯಿತು. ಬಾಲಕಿಯ ತಂದೆಯು ತನ್ನ ಮಗಳನ್ನು ಮೂವರು ವ್ಯಕ್ತಿಗಳು ಅಪಹರಣ ಮಾಡಿದ್ದಾರೆ ಎಂದು ದೂರು ನೀಡಿದ್ದರು.
ಅದರಂತೆ ದೂರು ಕೂಡ ದಾಖಲು ಮಾಡಿಕೊಳ್ಳಲಾಗಿತ್ತು. ಆದರೆ, ಈ ಪ್ರಕರಣದಲ್ಲಿ ಆತ ಹೆಸರಿಸಿರುವ ಯಾವುದೇ ಅಪಹರಣಕಾರರನ್ನು ಬಂಧಿಸಿಲ್ಲ. ನಾವು ಶಂಕಿತ ಆರೋಪಿಗಳ ಮನೆಗೆ ಭೇಟಿ ನೀಡಿದ್ದೆವು. ಅಲ್ಲಿಯೇ ನಮಗೆ ಹುಡುಗಿಯ ಬಗ್ಗೆ ಸುಳಿವು ಸಿಕ್ಕಿತು. ಅದೇ ಸುಳಿವಿನ ಮೇರೆಗೆ ನಾವು ಅವಳನ್ನು ಪತ್ತೆಹಚ್ಚಿದ್ದೇವೆ. ಆಕೆ ದೆಹಲಿಯಲ್ಲಿ ನೆಲೆಸಿರುವುದು ಪತ್ತೆಯಾಗಿದೆ ಎಂದು ಸ್ಟೇಷನ್ ಹೌಸ್ ಆಫೀಸರ್ ಅರವಿಂದ್ ಕುಮಾರ್ ಹೇಳಿದ್ದಾರೆ.
ಆಕೆಯ ಹೇಳಿಕೆಯನ್ನು ದಾಖಲಿಸಲು ಆಕೆಯನ್ನು ಬಿಹಾರ ಪೊಲೀಸ್ ಠಾಣೆಗೆ ಕರೆಸಲಾಗಿತ್ತು. ಅಲ್ಲಿ ವಿಚಾರಣೆ ವೇಳೆ ಆಕೆ ಅಪಹರಣದ ಆರೋಪ ಹೊತ್ತಿರುವ ಯಾವುದೇ ಶಂಕಿತ ವ್ಯಕ್ತಿಗಳು ತಾನು ದೆಹಲಿಗೆ ಸ್ಥಳಾಂತರವಾಗಿರುವುದಕ್ಕೆ ಸಂಬಂಧ ಹೊಂದಿಲ್ಲ ಎಂದು ಹೇಳಿದ್ದಾರೆ. ಆಕೆ ಕಣ್ಮರೆಯಾಗಿರುವ ಘಟನೆಯ ಹಿಂದೆ ಅವರ ಪಾತ್ರವಿಲ್ಲ ಎಂದು ಹೇಳಿದ ಮಹಿಳೆಯು, ಆ ಮೂವರನ್ನು ಅಪರಾಧಿಗಳು ಎಂದು ಗುರುತಿಸಲು ನಿರಾಕರಿಸಿದಳು.
ನಾನು ಕೇವಲ 16 ವರ್ಷ ವಯಸ್ಸಿನವಳಾಗಿದ್ದಾಗ ನನ್ನ ಮನೆಯವರು ನನ್ನ ಮದುವೆ ಮಾಡಲು ಬಯಸಿದ್ದರು. ಆದರೆ, ನಾನು ಇನ್ನೂ ಓದಲು ಬಯಸಿದ್ದರಿಂದ ನನ್ನ ಮನೆಯಿಂದ ತಪ್ಪಿಸಿಕೊಂಡು ಬಂದಿದ್ದೇನೆ. ನಾನು ನನ್ನ ಮನೆಯಿಂದ ಓಡಿಹೋಗಿ ಓದನ್ನು ಮುಂದುವರಿಸಲು ದೆಹಲಿಗೆ ಬಂದಿದ್ದೇನೆ ಎಂದು ಹುಡುಗಿ ಹೇಳಿಕೆ ನೀಡಿದ್ದಾಳೆಂದು ಪೊಲೀಸರು ಹೇಳಿದ್ದಾರೆ. ಆಕೆ ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗಿದ್ದಳು ಮತ್ತು ಅಂತಿಮವಾಗಿ ದೆಹಲಿ ಪೊಲೀಸ್‌ನಲ್ಲಿ ಕಾನ್ಸ್ಟೇಬಲ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾಳೆ ಮತ್ತು ಪ್ರಸ್ತುತ ದೆಹಲಿಯಲ್ಲಿ ತರಬೇತಿ ಪಡೆಯುತ್ತಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಮೂಲಕ ಐದು ವರ್ಷಗಳ ಹಿಂದೆ ದಾಖಲಾಗಿದ್ದ ಬಾಲಕಿ ಅಪಹರಣದ ಕೇಸ್ ಸುಖಾಂತ್ಯ ಕಂಡಂತಾಗಿದೆ. ಅಲ್ಲಿಗೆ ಅಪಹರಣದ ಆರೋಪ ಹೊತ್ತಿದ್ದವರು ಕೂಡ ಆರೋಪ ಮುಕ್ತರಾಗಿದ್ದು, ಮಹಿಳೆ ಪೊಲೀಸ್ ನೌಕರಿ ಸೇರುವ ಸಿದ್ಧತೆಯಲ್ಲಿದ್ದಾರೆ.
ಇದನ್ನೂ ಓದಿ: ಯೋಧನ ಪತ್ನಿ ಮೇಲೆ ಅತ್ಯಾಚಾರಕ್ಕೆ ಯತ್ನ.. ಗುಜರಾತ್ನಲ್ಲಿ ಬಾಲಕಿ ಮೇಲೆ ಅತ್ಯಾಚಾರ, ಕೊಲೆ