ಮೊರ್ಬಿ(ಗುಜರಾತ್): ಎಫ್‌ಎಸ್‌ಎಲ್ ತನಿಖೆಯ ಪ್ರಕಾರ ಮೊರ್ಬಿ ಎಂಬಲ್ಲಿ ನಡೆದ ತೂಗು ಸೇತುವೆ ದುರಂತಕ್ಕೆ ಒರೆವಾ ಕಂಪನಿಯ ನಿರ್ಲಕ್ಷ್ಯವೇ ಕಾರಣ ಎಂದು ತಿಳಿದು ಬಂದಿದೆ. ಸೇತುವೆ ದುರಂತ ನಡೆದ ದಿನದಂದು 3,165 ಟಿಕೆಟ್ಗಳನ್ನು ಸಾರ್ವಜನಿಕರಿಗೆ ನೀಡಿದ್ದು, ಅಷ್ಟು ತೂಕವನ್ನು ಹೊರುವಷ್ಟು ಸಾಮರ್ಥ್ಯ ಸೇತುವೆಗೆ ಇಲ್ಲದ ಕಾರಣ ದುರಂತ ಸಂಭವಿಸಿದೆ.
ಅಲ್ಲದೇ ಸೇತುವೆಯ ಸಾಮರ್ಥ್ಯ ಎಂದಿಗೂ ಪರೀಕ್ಷಿಸಲಾಗಿಲ್ಲ ಎಂಬ ವಿಚಾರವೂ ತನಿಖೆ ವೇಳೆ ಬಯಲಾಗಿದೆ. ಸ್ಥಳೀಯ ಆಡಳಿತವು ತೂಗು ಸೇತುವೆ ನಿರ್ವಹಣೆಗಾಗಿ ಖಾಸಗಿ ಏಜೆನ್ಸಿಯನ್ನು ನಿಯೋಜಿಸಿತ್ತು. ಮಚ್ಚು ನದಿಯ ಮೇಲಿನ ಸೇತುವೆಯು ಸುಮಾರು ಎಂಟು ತಿಂಗಳಿನಿಂದ ಬಳಕೆಯಾಗಿರಲಿಲ್ಲ. ಬಳಿಕ ಈ ಏಜೆನ್ಸಿಯು ಅಕ್ಟೋಬರ್ 26 ರಂದು ಸೇತುವೆಯನ್ನು ಸಾರ್ವಜನಿಕರಿಗೆ ಬಳಕೆ ಮಾಡಲು ಅನುವು ಮಾಡಿಕೊಟ್ಟಿತ್ತು.
ಮೊರ್ಬಿಯ ಮಚ್ಚು ನದಿಯ ತೂಗುಸೇತುವೆ ಜನರ ಹೆಚ್ಚಿನ ಭಾರದಿಂದಾಗಿ ಅಕ್ಟೋಬರ್ 30ರಂದು ಕುಸಿದಿತ್ತು. 135 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ದುರಂತದ ಸ್ಥಳಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅಲ್ಲದೇ ದುರಂತ ಪ್ರಕರಣ ಸಂಬಂಧ ಒಂಭತ್ತು ಮಂದಿಯನ್ನು ಪೊಲೀಸರು ಬಂಧಿಸಿದ್ದರು.
ಇದನ್ನೂ ಓದಿ: ಮೊರ್ಬಿ ಸೇತುವೆ ದುರಂತ: ಕಂಪನಿ ವಿರುದ್ಧ ಕ್ರಮಕ್ಕಾಗಿ ಹೈಕೋರ್ಟ್ಗೆ ಪಿಐಎಲ್ ಸಲ್ಲಿಕೆ