ಕುಂತಿ (ಜಾರ್ಖಂಡ್): ಮಾರುಕಟ್ಟೆ ಹೋಗಲು ಅನುಮತಿ ನೀಡದ ಗಂಡನ ಮೇಲೆ ಹೆಂಡತಿ ಮಾರಣಾಂತಿಕ ದಾಳಿ ನಡೆಸಿ, ಹತ್ಯೆ ಮಾಡಿರುವ ಘಟನೆ ಇಲ್ಲಿನ ಸೋನಪುರಗರ್ನಲ್ಲಿ ನಡೆದಿದೆ. ಘಟನೆ ಸಂಬಂಧ ಪೊಲೀಸರು ಆರೋಪಿ ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಮಹಿಳೆ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಕಲಾವತಿ ಆರೋಪಿತ ಮಹಿಳೆಯಾಗಿದ್ದು, ಅರ್ಜುನ್ ಸಿಂಗ್ ಕೊಲೆಯಾದ ವ್ಯಕ್ತಿ
ಏನಿದು ಘಟನೆ: ಮನೆಯ ಹತ್ತಿರದ ವಾಟರ್ ಪಂಪ್ನಲ್ಲಿ ಅರ್ಜುನ್ ಸಿಂಗ್ ಸ್ನಾನ ಮಾಡುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಕಲಾವತಿ ಮಾರುಕಟ್ಟೆಗೆ ಹೋಗಿಬರುವುದಾಗಿ ಪತಿಗೆ ತಿಳಿಸಿದ್ದರು. ಅದಕ್ಕೆ ಗಂಡ ಒಪ್ಪಿಲ್ಲ. ಇದರಿಂದ ಕುಪಿತಳಾದ ಕಲಾವತಿ, ಗಂಡನ ಜೊತೆ ರಸ್ತೆಯಲ್ಲಿಯೇ ವಾಗ್ವಾದ ನಡೆಸಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು ಜಗಳ ತಾರಕಕ್ಕೇರಿದೆ. ಆಗ ಅಲ್ಲೇ ಇದ್ದ ಇಟ್ಟಿಗೆ ತೆಗೆದುಕೊಂಡು ಪತಿ ತಲೆಗೆ ಪತ್ನಿ ಹೊಡೆದಿದ್ದಾಳೆ. ಗಂಭೀರ ಗಾಯಗೊಂಡ ಪತಿ ಕುಸಿದು ಬಿದ್ದಿದ್ದಾನೆ. ಅಷ್ಟಕ್ಕೂ ಸುಮ್ಮನಾಗದ ಕಲಾವತಿ, ನಿರಂತರವಾಗಿ ಇಟ್ಟಿಗೆಯಿಂದ ಹೊಡೆದಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆ ಕಂಡ ಸ್ಥಳೀಯರು ಅರ್ಜುನ್ ಸಿಂಗ್ ರಕ್ಷಣೆಗೆ ಧಾವಿಸಿದ್ದರು. ಆದರೆ, ಕಲಾವತಿ ಸ್ಥಳೀಯರಿಗೆ ಬೈಯ್ದು ಅವರನ್ನು ಓಡಿಸಿದ್ದಾಳೆ. ಬಳಿಕ ಗಂಡನನ್ನು ಹೆಗಲ ಮೇಲೆ ಹೊತ್ತು ತಂದು ಮನೆಯ ಕೋಣೆಯಲ್ಲಿ ಬಂಧಿಸಿದ್ದಳು. ಈ ವೇಳೆ ಗಾಯಗೊಂಡಿದ್ದ ಅರ್ಜುನ್ ಸಿಂಗ್ ಸಾವನ್ನಪ್ಪಿದ್ದಾನೆ. ಗ್ರಾಮಸ್ಥರ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದರು. ಮಹಿಳೆ ವಿರುದ್ದ ಅರ್ಜುನ್ ಚಿಕ್ಕಪ್ಪ ಕಲೇಶ್ವರ್ ಸಿಂಗ್ ನೀಡಿದ ದೂರಿನ ಅನ್ವಯ ಎಫ್ಐಆರ್ ದಾಖಲಿಸಲಾಗಿದೆ.
ಪ್ರಕರಣ ಕುರಿತು ಮಾತನಾಡಿರುವ ತೊರ್ಪ ಪೊಲೀಸರು, ಘಟನೆ ಬಳಿಕ ಕಲಾವತಿ ಮನೆಯಲ್ಲಿ ಕುಳಿತಿದ್ದಳು. ವಿಚಾರಣೆ ನಡೆಸಿದಾಗ ಗಂಡ ತನ್ನನ್ನು ಮಾರುಕಟ್ಟೆಗೆ ಹೋಗಲು ನಿರಾಕರಿಸಿದ ಹಿನ್ನೆಲೆ ಈ ಕೃತ್ಯ ಎಸಗಿದ್ದಾಗಿ ತಿಳಿಸಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಪತ್ನಿ ಜೊತೆ ಸೇರಿ ನೌಕರನಿಂದಲೇ ಬ್ಯಾಂಕ್ ಲೂಟಿ.. ಲಾಕರ್ನಲ್ಲಿದ್ದ 48 ಲಕ್ಷ ಮೌಲ್ಯದ ನಗದು, ವಸ್ತು ಕಳ್ಳತನ