ಮಂಚೇರಿಯಲ್ (ತೆಲಂಗಾಣ): ಸಿನಿಮಾ ಶೈಲಿಯ ವಿವಾಹವೊಂದು ತೆಲಂಗಾಣದಲ್ಲಿ ಪುನರಾವರ್ತನೆಯಾಗಿದೆ. ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದ ವಧುವನ್ನು ವರ ಆಸ್ಪತ್ರೆಯಲ್ಲೇ ವಿವಾಹವಾಗಿದ್ದಾನೆ. ಇಂತಹದ್ದೊಂದು ಘಟನೆ ತೆಲಂಗಾಣದ ಮಂಚೇರಿಯಲ್ ಜಿಲ್ಲೆಯಲ್ಲಿ ನಡೆದಿದೆ.
ಮಂಚೇರಿಯಲ್ ಜಿಲ್ಲೆಯ ಚೆನ್ನೂರು ಮಂಡಲದ ಬಾನೋತ್ ಶೈಲಜಾ ಎಂಬವರು ಜಯಶಂಕರ್ ಭೂಪಾಲಪಳ್ಳಿ ಜಿಲ್ಲೆಯ ಬಸ್ವರಾಜು ಪಲ್ಲೆ ಗ್ರಾಮದ ಹಟ್ಕರ್ ತಿರುಪತಿ ಎಂಬವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಗುರುವಾರ ಲಂಬಾಡಿಪಲ್ಲಿಯಲ್ಲಿ ಇವರಿಬ್ಬರ ವಿವಾಹ ನಿಶ್ಚಯಿಸಲಾಗಿತ್ತು. ಆದರೆ, ವಿವಾಹಬೇಕಿದ್ದ ವಧು ಬುಧವಾರ ಅಸ್ವಸ್ಥಗೊಂಡಿದ್ದರು. ಕೂಡಲೇ ಕುಟುಂಬಸ್ಥರು ಆಕೆಯನ್ನು ಮಂಚೇರಿಯಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಕೆಲವು ವೈದ್ಯಕೀಯ ಕಾರಣಗಳಿಗಾಗಿ ಆಕೆಗೆ ಶಸ್ತ್ರಚಿಕಿತ್ಸೆಯನ್ನು ವೈದ್ಯರು ನಡೆಸಿದ್ದು, ಕೆಲವು ದಿನಗಳ ಕಾಲ ಬೆಡ್ ರೆಸ್ಟ್ ತೆಗೆದುಕೊಳ್ಳುವಂತೆ ಸೂಚಿಸಿದ್ದರು. ಈ ವಿಷಯ ತಿಳಿದ ವರ ತಿರುಪತಿ ಬಹಳ ನೊಂದುಕೊಂಡಿದ್ದರು. ಒಂದೆಡೆ ಎರಡು ಕುಟುಂಬಗಳು ಬಡವರಾಗಿದ್ದು, ಮತ್ತೊಮ್ಮೆ ಮದುವೆ ಖರ್ಚು ಮಾಡಲು ಶಕ್ತರಾಗಿರಲಿಲ್ಲ. ಹೇಗಾದರೂ ಮಾಡಿ ಗುರುವಾರ ಹಿರಿಯರು ನಿಶ್ಚಯಿಸಿದ ಸಮಯಕ್ಕೆ ಆಸ್ಪತ್ರೆಯಲ್ಲೇ ಮದುವೆ ಮಾಡುವಂತೆ ತಿರುಪತಿ ಎರಡು ಮನೆಯವರನ್ನು ಕೇಳಿದ್ದಾರೆ.
ಇದನ್ನೂ ಓದಿ: ಬಾಲ್ಯ ವಿವಾಹಗಳ ವಿರುದ್ಧ ಸರ್ಕಾರದ ಕಠಿಣ ಕ್ರಮ: 12ನೇ ವಯಸ್ಸಿನಲ್ಲಿ ಮದುವೆಯಾಗಿದ್ದ ಯುವತಿ ಆತ್ಮಹತ್ಯೆ
ಕೊನೆಗೆ ಕುಟುಂಬಸ್ಥರು ಒಪ್ಪಿದ್ದು, ಶೈಲಜಾ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಯ ವೈದ್ಯರಿಗೆ ತಿರುಪತಿ ವಿಷಯ ತಿಳಿಸಿದ್ದಾರೆ. ವೈದ್ಯರು ವರನ ಮನಸ್ಥಿತಿಯನ್ನು ಅರ್ಥಮಾಡಿಕೊಂಡು ವಿವಾಹಕ್ಕೆ ಸಮ್ಮತಿ ಸೂಚಿಸಿದರು. ಬಳಿಕ ಮೊದಲೇ ನಿಶ್ಚಯವಾಗಿದ್ದ ಶುಭಮುಹೂರ್ತದಲ್ಲೇ ತಿರುಪತಿ ಅವರು ವಧು ಶೈಲಜಾರನ್ನು ಆಸ್ಪತ್ರೆಯಲ್ಲೇ ವಿವಾಹವಾದರು. ಶೀಘ್ರದಲ್ಲೇ ಆಕೆಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.
ಹಾಸಿಗೆ ವಿಚಾರಕ್ಕೆ ಮುರಿದು ಬಿದ್ದ ಮದುವೆ: ಇತ್ತೀಚೆಗೆ ತೆಲಂಗಾಣದಲ್ಲಿ ಹಾಸಿಗೆಯ ವಿಚಾರಕ್ಕೆ ಮದುವೆಯೊಂದು ಮುರಿದು ಬಿದ್ದಿತ್ತು. ಹೈದರಾಬಾದ್ನ ನಿವಾಸಿ ಮೌಲಾಲಿಯಾ ಮೊಹಮದ್ ಜಕಾರಿಯಾ ಎಂಬಾತನಿಗೆ ಬಂಡ್ಲಗುಡದ ಹುಡುಗಿಯೊಂದಿಗೆ ಫೆಬ್ರವರಿ 19 ರಂದು ವಿವಾಹ ನಿಶ್ಚಯವಾಗಿತ್ತು. ಸಂಪ್ರದಾಯದಂತೆ ವರನಿಗೆ ನೀಡಬೇಕಾದ ಹಾಸಿಗೆ, ಪೀಠೋಪಕರಣಗಳನ್ನು ಮುಂಚಿತವಾಗಿಯೇ ವಧುವಿನ ಮನೆಯವರು ಕಳುಹಿಸಿಕೊಟ್ಟಿದ್ದರು. ಅದನ್ನು ಪರಿಶೀಲಿಸಿದ ವರನಿಗೆ ಅದೆಲ್ಲಾ ಹಳೆಯ ವಸ್ತುಗಳು ಎಂದು ತಿಳಿದು ಹೋಯಿತು. ಇದರಿಂದ ಕೋಪಗೊಂಡ ವರನ ಕುಟುಂಬಸ್ಥರು ಮದುವೆಗೆ ನಿರಾಕರಿಸಿದ್ದರು.
ಕಲಿತ ಕಾಲೇಜಿನಲ್ಲಿ ದಾಂಪತ್ಯಕ್ಕೆ ಕಾಲಿರಿಸಿದ ಜೋಡಿ: ಕೇರಳದ ಎರ್ನಾಕುಲಂನಲ್ಲಿ ಪ್ರೀತಿಸಿದ ಜೋಡಿಗಳು ತಾವು ಕಲಿತ ಕಾಲೇಜಿನಲ್ಲೇ ದಾಂಪತ್ಯಕ್ಕೆ ಕಾಲಿರಿಸಿದ ಘಟನೆ ಇತ್ತೀಚೆಗೆ ನಡೆದಿತ್ತು. ಎರ್ನಾಕುಲಂ ಮಹಾರಾಜ ಕಾಲೇಜಿನ ಮಹಾತ್ಮ ಗಾಂಧಿ ವಿಶ್ವವಿದ್ಯಾಲಯದಲ್ಲಿ ಕಲಾ ಉತ್ಸವ ಏರ್ಪಡಿಸಲಾಗಿತ್ತು. ಈ ಮಧ್ಯೆ ಸ್ನೇಹಿತರು ತಯಾರಿಸಿದ ಹೂವಿನ ಹಾರ ಬದಲಾಯಿಸಿಕೊಂಡ ಪ್ರೇಮಿಗಳು ಮದುವೆಯಾಗಿದ್ದರು. ಮನೆಯವರ ವಿರೋಧದ ನಡುವೆ ಧರ್ಮ ಮೀರಿ ಪ್ರೇಮಿಗಳು ವಿವಾಹವಾಗಿದ್ದು, ಸಾವಿರಾರು ವಿದ್ಯಾರ್ಥಿಗಳು ಸಾಕ್ಷಿಯಾಗಿದ್ದರು.