ಉನ್ನಾವೋ (ಉತ್ತರ ಪ್ರದೇಶ): ಮದುವೆಯ ಸಮಯದಲ್ಲಿ ವರನ ತಲೆಯಿಂದ ವಿಗ್ ಕೆಳಗೆ ಬಿದ್ದ ಘಟನೆ ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯ ಸಫಿಪುರ್ ಕೊಟ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ವರನ ಬೋಳು ತಲೆಯನ್ನು ನೋಡಿದ ವಧು ಮದುವೆಗೆ ನಿರಾಕರಿಸಿದ್ದಾಳೆ. ಮದುವೆ ನಡೆಯುತ್ತಿದ್ದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾದ ಹಿನ್ನೆಲೆ ಪೊಲೀಸರಿಗೆ ಕರೆ ಮಾಡಲಾಯಿತು. ಬಳಿಕ ಮಧ್ಯಪ್ರವೇಶಿಸಿದ ಪೊಲೀಸರು ವಧು-ವರರ ಕಡೆಯವರನ್ನು ಹೇಗೋ ಮನವೊಲಿಸಿ ಸಮಾಧಾನಪಡಿಸಿದರು.
ಸಾಕಷ್ಟು ಚರ್ಚೆಯ ನಂತರವೂ ವಧುವಿನ ಕಡೆಯವರು ಈ ಮದುವೆಗೆ ಒಪ್ಪಿಗೆ ನೀಡಲಿಲ್ಲ. ಹಾಗಾಗಿ ವರನು ಮದುವೆಯಾಗದೇ ಹಿಂದಿರುಗಬೇಕಾಯಿತು. ಮೇ20 ರಂದು ವರನ ಕಡೆಯವರು ವಧುವಿನ ಮನೆಗೆ ಮೆರವಣಿಗೆ ಮೂಲಕ ಬಂದಿದ್ದರು. ಎಲ್ಲವೂ ಸರಿಯಾಗಿಯೇ ನಡೆಯುತ್ತಿತ್ತು. ಜೈಮಾಲ್ ಕಾರ್ಯಕ್ರಮಕ್ಕೆ ವೇದಿಕೆಯನ್ನು ಶೃಂಗಾರಗೊಳಿಸಲಾಗಿತ್ತು. ವಧು-ವರರು ವೇದಿಕೆಗೆ ಬಂದರು. ಇಬ್ಬರೂ ಹಾರವನ್ನು ಒಬ್ಬರಿಗೊಬ್ಬರು ಹಾಕಿಕೊಂಡರು. ಇದಾದ ಬಳಿಕ ವಧುವಿನ ಸಹೋದರ ವರನ ಮುಖಕ್ಕೆ ನೀರನ್ನು ಎರಚಿದ್ದಾನೆ. ಆಗ ವರನ ಕೂದಲಿನ ವಿಗ್ ಕಳಚಿ ಬಿದ್ದಿದೆ.
ಆಗ ಎಲ್ಲಾರಿಗೂ ವರನ ಬೋಳು ತಲೆ ಗೋಚರಿಸಿದೆ. ಇದನ್ನು ನೋಡಿದ ಎಲ್ಲಾರೂ ಶಾಕ್ ಆಗಿದ್ದಾರೆ. ಈ ಕಾರಣದಿಂದ ವಧು ಮದುವೆಯಾಗಲು ನಿರಾಕರಿಸಿದ್ದಾಳೆ. ಮದುವೆ ವಿಷಯವಾಗಿ ಎರಡೂ ಕಡೆಯವರ ನಡುವೆ ಸಾಕಷ್ಟು ಜಗಳ ನಡೆದಿದ್ದು, ವರನ ಕಡೆಯವರು ಪೊಲೀಸರಿಗೆ ಕರೆ ಮಾಡಿದ್ದಾರೆ. ಇದುವರೆಗೆ ಯಾರ ಕಡೆಯಿಂದಲೂ ದೂರು ಬಂದಿಲ್ಲ, ದೂರು ಪಡೆದು ಕ್ರಮ ಕೈಗೊಳ್ಳಲಾಗುವುದು ಎಂದು ಕೋತ್ವಾಲಿ ಪ್ರಭಾರಿ ಚಂದ್ರಕಾಂತ್ ತಿಳಿಸಿದರು.
ಇದನ್ನೂ ಓದಿ: ಬಿಜೆಪಿ ತೊರೆದು ಟಿಎಂಸಿಗೆ ಮರು ಸೇರ್ಪಡೆಯಾದ ಸಂಸದ ಅರ್ಜುನ್ ಸಿಂಗ್