ಹೈದರಾಬಾದ್: ಹೈದರಾಬಾದ್ ವಿಶೇಷ ತನಿಖಾ ತಂಡ (ಎಸ್‌ಐಟಿ) ನಕಲಿ ಪ್ರಮಾಣಪತ್ರಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಇಬ್ಬರನ್ನು ಬಂಧಿಸಿದೆ. ಮಧ್ಯಪ್ರದೇಶದ ಭೋಪಾಲ್‌ನಲ್ಲಿರುವ ಸರ್ವಪಲ್ಲಿ ರಾಧಾಕೃಷ್ಣ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಕುಶ್ವಾ ಮತ್ತು ಹಾಲಿ ಉಪಕುಲಪತಿ ಪ್ರಶಾಂತ್ ಪಿಳ್ಳೈ ಅವರನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಈಗಾಗಲೇ ಏಳು ಏಜೆಂಟ್‌ಗಳು,19 ವಿದ್ಯಾರ್ಥಿಗಳು ಮತ್ತು ಆರು ಪೋಷಕರನ್ನು ಪೊಲೀಸ್ ಅಧಿಕಾರಿಗಳು ಬಂಧಿಸಿದ್ದಾರೆ.
ಈ ವಿಸಿಗಳು ಏಜೆಂಟರಿಂದ ವಿದ್ಯಾರ್ಥಿಗಳ ವಿವರ ಪಡೆದು ಪ್ರತಿ ಕೋರ್ಸ್‌ಗೆ ದರ ನಿಗದಿಪಡಿಸುತ್ತಿರುವುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ. ನಕಲಿ ಪ್ರಮಾಣಪತ್ರಗಳ ವಿಚಾರವಾಗಿ ಫೆಬ್ರವರಿಯಲ್ಲಿ ಹೈದರಾಬಾದ್‌ನ ಮಲಕ್‌ಪೇಟ್‌ನಲ್ಲಿ ಮೊದಲ ಎಫ್‌ಐಆರ್ ದಾಖಲಾಗಿತ್ತು. ಆ ನಂತರ ಆಸಿಫ್‌ನಗರ, ಚಾದರ್‌ಘಾಟ್ ಮತ್ತು ಮುಶಿರಾಬಾದ್‌ನಲ್ಲಿ ಪ್ರಕರಣಗಳು ದಾಖಲಾಗಿದ್ದವು.
ಕೆಲವು ವಿದ್ಯಾರ್ಥಿಗಳು ಇಂತಹ ಪ್ರಮಾಣ ಪತ್ರಗಳನ್ನು ಪಡೆದು ವಿದೇಶಕ್ಕೆ ತೆರಳಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮಾಜಿ ಉಪಕುಲಪತಿ ಕುಶ್ವಾ ಸರ್ವಪಲ್ಲಿ ವಿಶ್ವವಿದ್ಯಾನಿಲಯದಲ್ಲಿ ಕೆಲಸ ಮಾಡಿದ್ದರಿಂದ 2017 ರಿಂದಲೂ ಈ ನಕಲಿ ಪ್ರಮಾಣಪತ್ರಗಳ ದಂಧೆ ನಡೆಯುತ್ತಿದೆ ಎನ್ನಲಾಗಿದೆ. ಹೈದರಾಬಾದ್ ಸಿಐಡಿ ಹೆಚ್ಚುವರಿ ಸಿಪಿ ಎಆರ್ ಶ್ರೀನಿವಾಸ್ ಮಾತನಾಡಿ, ನಕಲಿ ಪ್ರಮಾಣಪತ್ರಗಳ ಸಮಸ್ಯೆಗೆ ಸಂಬಂಧಿಸಿದಂತೆ ಏಳು ಎಸ್‌ಐಟಿ ತಂಡಗಳು ಪ್ರಸ್ತುತ ದೇಶದ ಏಳು ರಾಜ್ಯಗಳ ವಿವಿಧ ವಿಶ್ವವಿದ್ಯಾಲಯಗಳಲ್ಲಿ ತನಿಖೆ ನಡೆಸುತ್ತಿವೆ ಎಂದು ವಿವರಿಸಿದ್ದಾರೆ.
ಇದನ್ನೂ ಓದಿ: ಕೊಡಗಿನಲ್ಲಿ ಅನಾಹುತ ಸೃಷ್ಟಿಸಿದ ವರುಣ: ಜನಜೀವನ ಅಸ್ತವ್ಯಸ್ತ