ಬೊಕಾರೋ (ಜಾರ್ಖಂಡ್): ಸರ್ಕಾರಿ ಸೌಲಭ್ಯಗಳ ಪಡೆಯಲು ಮೃತ ವ್ಯಕ್ತಿಗಳನ್ನೇ ಜೀವಂತವಾಗಿರುವುದಾಗಿ ತೋರಿಸಿ ಮೋಸ ಮಾಡುವುದನ್ನು ಕೇಳಿದ್ದೇವೆ. ಆದರೆ, ಇಲ್ಲೊಬ್ಬ ಜೀವಂತವಾಗಿರುವ ವ್ಯಕ್ತಿಯನ್ನು ಸರ್ಕಾರಿ ಕಡತಗಳಲ್ಲಿ ಮೃತ ಎಂದು ದಾಖಲಿಸಲಾಗಿದೆ. ಇದರಿಂದ ತಾನು ಜೀವಂತವಾಗಿರುವುದನ್ನು ಸಾಬೀತುಪಡಿಸಲು ನಿರಂತರವಾಗಿ ಸರ್ಕಾರಿ ಕಚೇರಿಗೆ ಆ ವ್ಯಕ್ತಿ ಅಲೆಯುವಂತೆ ಆಗಿದೆ.
ಜಾರ್ಖಂಡ್ ರಾಜ್ಯದ ಬೊಕಾರೋ ಜಿಲ್ಲೆಯಲ್ಲಿ ಇಂತಹ ವಿಚಿತ್ರ ಘಟನೆ ವರದಿಯಾಗಿದೆ. ಇಲ್ಲಿನ ಕಸ್ಮಾರ್ ಬ್ಲಾಕ್‌ನ ಬಗ್ಡಾ ಗ್ರಾಮದ ನಿವಾಸಿ 70 ವರ್ಷದ ಖೇದನ್ ಘಾನ್ಸಿ ಎಂಬುವವರನ್ನು ಸರ್ಕಾರಿ ದಾಖಲೆಗಳಲ್ಲಿ ಮೃತಪಟ್ಟಿದ್ದಾರೆ ಎಂದು ನಮೂದಿಸಲಾಗಿದೆ. ಈ ಎಡವಟ್ಟಿನ ಪರಿಣಾಮ ಈತನಿಗೆ ಬರುತ್ತಿದ್ದ ಪಿಂಚಣಿ ನಿಂತು ಹೋಗಿದೆ. ಹೀಗಾಗಿ ಸರ್ಕಾರಿ ಅಧಿಕಾರಿಗಳ ಮುಂದೆ ನಿಂತು ನಾನು ಬದುಕಿದ್ದಾನೆ ಎಂಬ ಹೇಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಪ್ರಕರಣದ ವಿವರ: 70 ವರ್ಷದ ವೃದ್ಧನಾಗಿರುವ ಖೇದನ್ ಘಾನ್ಸಿ ಕಳೆದ ಹಲವು ವರ್ಷಗಳಿಂದ ಸರ್ಕಾರಿ ಯೋಜನೆಯಿಂದ ನಿಯಮಿತವಾಗಿ ವೃದ್ಧಾಪ್ಯ ವೇತನ ಪಡೆಯುತ್ತಿದ್ದರು. ಆದರೆ, ಇದ್ದಕ್ಕಿದ್ದಂತೆ 2022ರ ಸೆಪ್ಟೆಂಬರ್ ತಿಂಗಳಿಂದ ಪಿಂಚಣಿ ನಿಂತುಹೋಯಿತು. ಏಕಾಏಕಿ ಪಿಂಚಣಿ ಸ್ಥಗಿತಗೊಂಡ ನಂತರ ಬ್ಲಾಕ್ ಕಚೇರಿಗೆ ತೆರಳಿ ವಿಚಾರಿಸಿದ್ದಾರೆ. ಆದರೆ, ಅಲ್ಲಿನ ಅಧಿಕಾರಿಗಳ ಹೇಳಿದ ಮಾತುಗಳನ್ನು ಕೇಳಿ ಘಾನ್ಸಿ ಅವರಿಗೆ ಒಂದು ಕ್ಷಣ ಕುಸಿದು ಬೀಳುವಂತೆ ಆಗಿದೆ. ಯಾಕೆಂದರೆ, ಅಧಿಕೃತ ದಾಖಲೆಗಳಲ್ಲಿ ಮೃತಪಟ್ಟಿರುವುದಾಗಿ ಘೋಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದ್ದರಿಂದ ಈಗ ಖೇಡನ್ ಘಾನ್ಸಿ ತನ್ನನ್ನು ತಾನು ಜೀವಂತವಾಗಿ ಸಾಬೀತುಪಡಿಸಲು ನಿರಂತರವಾಗಿ ಓಡುತ್ತಿದ್ದಾರೆ.
ಎಂಟು ತಿಂಗಳು ಕಳೆದರೂ ಸಿಗದ ಪರಿಹಾರ: ಖೇದನ್ ಘಾನ್ಸಿ ಅವರ ಸಮಸ್ಯೆ ಅರಿತ ಕಸ್ಮಾರ್ ಬ್ಲಾಕ್ ಅಭಿವೃದ್ಧಿ ಅಧಿಕಾರಿ (ಬಿಡಿಒ) ವಿಜಯ್ ಕುಮಾರ್ ತಮ್ಮದೇ ಮಟ್ಟದಿಂದಲೇ ತನಿಖೆ ನಡೆಸಿದ್ದಾರೆ. ಆಗ ಸರ್ಕಾರಿ ಕಡತಗಳಲ್ಲಿ ಖೇದನ್ ಘಾನ್ಸಿ ಸತ್ತಿದ್ದಾನೆ ಎಂದು ನಮೋದಿಸಿರುವುದು ಖಚಿತ ಪಡಿಸಿಕೊಂಡಿದ್ದಾರೆ. ಇದಾದ ಕಾಸ್ಮಾರ್ ಬಿಡಿಒ 2023ರ ಏಪ್ರಿಲ್ 20ರಂದು ಬೊಕಾರೊ ಸಾಮಾಜಿಕ ಭದ್ರತೆಯ ಸಹಾಯಕ ನಿರ್ದೇಶಕ ಅವರಿಗೆ ಪತ್ರ ಬರೆದಿದ್ದಾರೆ.
ಸರ್ಕಾರಿ ದಾಖಲೆಗಳಲ್ಲಿ ತಪ್ಪಾಗಿ ಜೀವಂತರಾಗಿರುವ ಪಿಂಚಣಿದಾರ ಖೇದನ್ ಘಾನ್ಸಿ ಅವರನ್ನು ಸತ್ತಿದ್ದಾರೆ ಎಂದು ದಾಖಲಿಸಲಾಗಿದೆ. ಈ ಬಗ್ಗೆ ಬಗ್ಡಾದ ಪಂಚಾಯತ್ ಕಾರ್ಯದರ್ಶಿ ಭೌತಿಕ ಪರಿಶೀಲನೆ ಮಾಡಿರುವುದಾಗಿ ಹೇಳಿ ದೃಢೀಕರಣ ಮಾಡಿದ್ದಾರೆ. ಈ ಕಾರಣದಿಂದಾಗಿ ಖೇದನ್ ಘಾನ್ಸಿಯ ಪಿಂಚಣಿಯನ್ನು 2022ರ ಸೆಪ್ಟೆಂಬರ್‌ನಿಂದ ನಿಲ್ಲಿಸಲಾಗಿದೆ. ಆದರೆ, ವಾಸ್ತವವಾಗಿ ಪ್ರಸ್ತುತ ಖೇಡನ್ ಘಾನ್ಸಿ ಜೀವಂತವಾಗಿ ಪತ್ತೆಯಾಗಿದ್ದಾರೆ ಎಂದು ಕಸ್ಮಾರ್ ಬಿಡಿಒ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ. ಆದ್ದರಿಂದ, ಸೆಪ್ಟೆಂಬರ್‌ನಿಂದ ಅವರ ಪಿಂಚಣಿಯನ್ನು ಶೀಘ್ರವಾಗಿ ಪಾವತಿಸಬೇಕೆಂದೂ ಹೇಳಿದ್ದಾರೆ. ಆದರೆ, ಎಂಟು ತಿಂಗಳಿಗೂ ಹೆಚ್ಚು ಸಮಯ ಕಳೆದರೂ ಖೇದನ್ ಘಾನ್ಸಿಯ ಪಿಂಚಣಿ ಆರಂಭವಾಗಿಲ್ಲ. ಹೀಗಾಗಿ ನಿರಂತರವಾಗಿ ಸರ್ಕಾರಿ ಕಚೇರಿ ಅಲೆಯುವಂತೆ ಆಗಿದೆ.
ಇದನ್ನೂ ಓದಿ: ಪಿಂಚಣಿ ಪಡೆಯಲು ವೃದ್ಧೆಯನ್ನು ಕವಡಿಯಲ್ಲಿ ಕಚೇರಿಗೆ ಕರೆತಂದ ತಂದೆ, ಮಗ: ವಿಡಿಯೋ ವೈರಲ್