ಕೊಟ್ಟಾಯಂ(ಕೇರಳ): ಸಂಗಾತಿ ವಿನಿಮಯ ಪ್ರಕರಣದಲ್ಲಿ ದೂರುದಾರಳಾಗಿದ್ದ ಮಹಿಳೆಯನ್ನು ಹತ್ಯೆ ಮಾಡಿರುವ ಘಟನೆ ಕೊಟ್ಟಾಯಂ ಜಿಲ್ಲೆಯ ಮನಾರ್ಕಾಡುವಿನಲ್ಲಿ ನಡೆದಿದೆ. ಇಂದು ಬೆಳಗ್ಗೆ ತಂದೆ ಮತ್ತು ಸಹೋದರ ಕೆಲಸಕ್ಕೆ ಹೋದಾಗ ಕೊಲೆಯಾಗಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ತಾಯಿಯನ್ನು ನೋಡಿದ ಮಕ್ಕಳು ಅಕ್ಕಪಕ್ಕದ ಮನೆಯವರಿಗೆ ವಿಷಯ ತಿಳಿಸಿದ್ದಾರೆ. ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ, ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ, ಮೃತದೇಹವನ್ನು ಕೊಟ್ಟಾಯಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಿದ್ದಾರೆ.
ಇದೇ ವೇಳೆ, ಮಹಿಳೆಯ ಪತಿಯೇ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿ ಮಹಿಳೆಯ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಆರೋಪಿ ಪತಿ ಪತ್ತೆಗೆ ಶೋಧಕಾರ್ಯ ಆರಂಭಿಸಿದ್ದಾರೆ. ಸಂಗಾತಿ ವಿನಿಮಯ ಪ್ರಕರಣದ ಆರೋಪಿಯಾಗಿರುವ ಪತಿಯಿಂದ ಆಕೆ ದೂರ ಉಳಿದಿದ್ದಳು. ಹತ್ಯೆಗೆ ಕಾರಣ ಇನ್ನು ತಿಳಿದು ಬಂದಿಲ್ಲ, ಯಾರು ಈ ಭೀಕರ ಹತ್ಯೆ ಮಾಡಿದ್ದಾರೆ ಎಂಬುದು ತನಿಖೆಯ ನಂತರ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ವರ್ಷದ ಜನವರಿಯಲ್ಲಿ, ಮೃತ ಮಹಿಳೆಯ ದೂರಿನ ಆಧಾರದ ಮೇಲೆ ಪೊಲೀಸರು ಸಂಗಾತಿ ವಿನಿಮಯದಲ್ಲಿ ತೊಡಗಿಸಿಕೊಂಡಿದ್ದ ಗ್ಯಾಂಗ್ ಅನ್ನು ಭೇದಿಸಿ. ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಮಹಿಳೆಯ ಪತಿ ಸೇರಿದಂತೆ ಏಳು ಮಂದಿಯನ್ನು ಬಂಧಿಸಿದ್ದರು. ಪತಿ ತನಗೆ ಬೇರೊಬ್ಬನ ಜೊತೆ ಮಲಗುವಂತೆ ಒತ್ತಾಯಿಸಿದ್ದಾನೆ ಎಂದು ಕೊಲೆಯಾದ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದರು.
ಇದನ್ನೂ ಓದಿ:ಪತಿ ಹತ್ಯೆ ಮಾಡಿ ಆತ್ಮಹತ್ಯೆ ಕಥೆ ಕಟ್ಟಿದ ಪತ್ನಿ, ಪ್ರಿಯಕರ ಬೆಂಗಳೂರಿನಲ್ಲಿ ಸೆರೆ
ಪತಿ ತನಗೆ ಹಲವರ ಜತೆ ಲೈಂಗಿಕ ಸಂಬಂಧ ಹೊಂದುವಂತೆ ಒತ್ತಾಯಿಸಿ ಚಿತ್ರಹಿಂಸೆ ನೀಡಿದ್ದಾನೆ ಎಂದು ಮಹಿಳೆ ಪೊಲೀಸರಿಗೆ ದೂರು ನೀಡಿದ್ದರು. ನಂತರ ಪೊಲೀಸರು ನಡೆಸಿದ ತನಿಖೆಯಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಸಂಗಾತಿ ವಿನಿಮಯ ಮಾಡಿಕೊಳ್ಳುವ ದೊಡ್ಡ ದಂಧೆಯ ಬಗ್ಗೆ ಆಘಾತಕಾರಿ ಮಾಹಿತಿ ಹೊರಬಿದ್ದಿತ್ತು. ಅವರು ಸಾಮಾಜಿಕ ಮಾಧ್ಯಮದಲ್ಲಿ 'ಕಪಲ್ ಶೇರಿಂಗ್' ಮತ್ತು 'ಕಪಲ್ ಮೀಟ್ ಅಪ್ ಕೇರಳ' ಎಂಬ ಗುಂಪುಗಳನ್ನು ರಚಿಸಿಕೊಂಡು, ರಹಸ್ಯ ಚಾಟ್‌ಗಳ ಮೂಲಕ ಸಂವಹನ ನಡೆಸುತ್ತಿದ್ದರು. ಈ ಗುಂಪುಗಳಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ಸದಸ್ಯರಾಗಿದ್ದರು ಎಂದು ಪೊಲೀಸರ ತನಿಖೆಯಿಂದ ಬಯಲಾಗಿತ್ತು.
ಪತ್ನಿ ವಿನಿಮಯ ಮಾಡಿಕೊಳ್ಳುವವರಿಗೆ ಹಣ ನೀಡುತ್ತಿರುವುದವರನ್ನು ಪೊಲೀಸರು ಪತ್ತೆ ಮಾಡಿದ್ದಾರೆ. "ನನ್ನ ಸಹೋದರಿಗೆ ಎಂಟು ಮಂದಿ ಕ್ರೂರವಾಗಿ ಚಿತ್ರಹಿಂಸೆ ನೀಡಿದ್ದಾರೆ ಮತ್ತು ಆಕೆ ಸಂಗಾತಿ ವಿನಿಮದಲ್ಲಿ ಭಾಗವಹಿಸಲು ನಿರಾಕರಿಸಿದಾಗ ಪತಿ ಮಕ್ಕಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ. ಎರಡು ವರ್ಷಗಳ ಕಾಲ ಮಹಿಳೆಗೆ ದೌರ್ಜನ್ಯವೆಸಗಿ, ಗ್ಯಾಂಗ್‌ನ ಭಾಗವಾಗಲು ನಿರಾಕರಿಸಿದಾಗ ಆಕೆಗೆ ಗಂಭೀರವಾಗಿ ಥಳಿಸಿದ್ದಾನೆ" ಎಂದು ಮಹಿಳೆಯ ಸಹೋದರ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.
ಇದನ್ನೂ ಓದಿ:ಮದುವೆಯಾಗಿ ಐದು ವರ್ಷಗಳಲ್ಲಿ ಸ್ಮಶಾನ ಸೇರಿದ ಗೃಹಿಣಿ, ವರದಕ್ಷಿಣೆ ಕಿರುಕುಳದಿಂದಲೇ ಕೊಲೆಯಾದರಾ?