ವಿಕಾರಾಬಾದ್, ತೆಲಂಗಾಣ: ಮನೆಯಲ್ಲಿ ನಡೆದ ಸಣ್ಣ ಜಗಳದಿಂದ ಮನನೊಂದ ಯುವತಿ ರಾತ್ರಿ ಹೊರಗೆ ಹೋಗಿದ್ದಾಳೆ. ಕುಟುಂಬಸ್ಥರು ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಬೆಳಗ್ಗೆ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಆಕೆಯ ದೇಹದ ಮೇಲಿರುವ ಗಾಯಗಳ ಆಧಾರದ ಮೇಲೆ ಯಾರೋ ಆಕೆಯನ್ನು ಕ್ರೂರವಾಗಿ ಹಿಂಸಿಸಿ ಕೊಂದಿದ್ದಾರೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಜೂನ್ 10 ರಂದು ವಿಕಾರಾಬಾದ್ ಜಿಲ್ಲೆಯ ಪರಿಗಿ ಪೊಲೀಸ್ ಠಾಣೆಯಲ್ಲಿ ಈ ದುಷ್ಕೃತ್ಯ ನಡೆದಿದೆ.
ಎಸ್‌ಎಸ್‌ಐ ವಿಠ್ಠಲ್ ರೆಡ್ಡಿ ಅವರ ಹೇಳಿಕೆ ಪ್ರಕಾರ.., ವಿಕಾರಾಬಾದ್ ಜಿಲ್ಲೆಯ ಕಲ್ಲಾಪುರ ಗ್ರಾಮದ ಶಿರೀಷಾ (19) ಇಂಟರ್ ಮೀಡಿಯೆಟ್ ಮುಗಿಸಿದ್ದಾರೆ. ನಂತರ ಅವರು ಎರಡು ತಿಂಗಳು ನರ್ಸಿಂಗ್ ಅಧ್ಯಯನ ಮಾಡಿ ಓದು ನಿಲ್ಲಿಸಿದ್ದರು. ಈಗ ವಿಕಾರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ತಾಯಿ ಯಾದಮ್ಮ ಅಸ್ವಸ್ಥಗೊಂಡಿದ್ದರಿಂದ ಶಿರೀಷಾ ಸಹೋದರ ಶ್ರೀಕಾಂತ್ ಮೂರು ತಿಂಗಳ ಹಿಂದೆ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ದಿದ್ದಾರೆ. ತಂದೆ ಜಂಗಯ್ಯ ಮತ್ತು ಕಿರಿಯ ಸಹೋದರ ಶ್ರೀನಿವಾಸ್ ಮನೆಯಲ್ಲಿದ್ದು, ಶಿರೀಷಾ ಸಹ ತಾಯಿಯ ಆರೈಕೆಗಾಗಿ ಹೈದರಾಬಾದ್ಗೆ ತೆರಳಿದ್ದರು.
ಎರಡು ತಿಂಗಳ ಹಿಂದೆ ಅಡುಗೆ ಮಾಡಲು ಯಾರೂ ಇಲ್ಲದ ಕಾರಣ ತಂದೆ ಜಂಗಯ್ಯ ಶಿರೀಷಾಳನ್ನು ಮನೆಗೆ ಬರುವಂತೆ ತಿಳಿಸಿದ್ದರು. ಕೆಲವು ದಿನಗಳ ನಂತರ ಹೈದರಾಬಾದ್‌ನಿಂದ ತನ್ನ ಮನೆಗೆ ಶಿರೀಷಾ ಹೋಗಿದ್ದಾರೆ. ಶನಿವಾರ ಅಂದರೆ ಜೂನ್ 10 ರಂದು ಅವಳ ಕಿರಿಯ ಸಹೋದರ ಶ್ರೀನಿವಾಸ್ ಪರಿಗಿಯಲ್ಲಿ ನೆಲೆಸಿದ್ದ ತನ್ನ ಇನ್ನೊಬ್ಬ ತಂಗಿಯ ಪತಿ ಅನಿಲ್ಗೆ ಕರೆ ಮಾಡಿ ಶಿರೀಷಾ ಅಡುಗೆ ಮಾಡುತ್ತಿಲ್ಲ ಎಂದು ಹೇಳಿದ್ದಾನೆ. ಕೂಡಲೇ ಕಲ್ಲಾಪುರಕ್ಕೆ ಬಂದ ಅನಿಲ್ ಶಿರೀಷಾಗೆ ಛೀಮಾರಿ ಹಾಕಿ ಥಳಿಸಿದ್ದಾರೆ. ಈ ವಿಚಾರವಾಗಿ ಆಕೆಯ ತಂದೆಯೂ ಶಿರೀಷಾಗೆ ಥಳಿಸಿದ್ದರಿಂದ ಮನನೊಂದ ಆಕೆ ರಾತ್ರಿ ಹತ್ತೂವರೆ ಗಂಟೆಯ ನಂತರ ಮನೆಯಿಂದ ಹೊರಟು ಹೋಗಿದ್ದಳು.
ಆಕೆ ವಾಪಸ್ ಬಾರದ ಕಾರಣ ಕುಟುಂಬಸ್ಥರು ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಭಾನುವಾರ ಬೆಳಗ್ಗೆ ಗ್ರಾಮದಿಂದ ಒಂದು ಕಿಲೋಮೀಟರ್ ದೂರದಲ್ಲಿರುವ ಕೊಳದಲ್ಲಿ ಶಿರೀಷಾ ಶವ ಪತ್ತೆಯಾಗಿದೆ. ಆರೋಪಿಗಳು ಆಕೆಯ ಎರಡು ಕಣ್ಣುಗಳಿಗೆ ಚೂರಿ ಇರಿದು, ಕುತ್ತಿಗೆ ಸೀಳಿ, ತಲೆಗೆ ಗಾಯಗೊಳಿಸಿ ಬರ್ಬರವಾಗಿ ಕೊಲೆ ಮಾಡಿರುವುದು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಈ ಅಪರಾಧ ಮಾಡಿದವರು ಯಾರು?, ಶಿರೀಷಾ ಯಾರೊಂದಿಗಾದರೂ ಸಂಪರ್ಕ ಹೊಂದಿದ್ದಾಳೆಯೇ? ಎಂಬುದು ಸೇರಿ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಸಿರೀಷಾ ಅವರ ಸಹೋದರ ಶ್ರೀಕಾಂತ್ ಅವರ ದೂರಿನ ಮೇರೆಗೆ ಅನುಮಾನಾಸ್ಪದ ಕೊಲೆ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಡಿಎಸ್ಪಿ ಕರುಣಾಸಾಗರರೆಡ್ಡಿ, ಸಿಐ ವೆಂಕಟರಾಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಪ್ರಕರಣದಲ್ಲಿ ಪ್ರಮುಖವಾಗಿ ಶಿರೀಷಾ ಕುಟುಂಬಸ್ಥರ ಮೇಲೆ ಶಂಕೆ ವ್ಯಕ್ತವಾಗುತ್ತಿದೆ.
ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ತಂದೆ ಜಂಗಯ್ಯ ಮತ್ತು ಸಹೋದರಿಯ ಪತಿ ಅನಿಲ್ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಸೋದರ ಮಾವನ ಮೇಲಿನ ಅನುಮಾನ ಬಲವಾಗುತ್ತಿದ್ದು, ಆಳವಾಗಿ ತನಿಖೆ ನಡೆಸುತ್ತಿದ್ದೇವೆ ಎಂದು ಡಿಎಸ್ಪಿ ಕರುಣಾಸಾಗರ ರೆಡ್ಡಿ ತಿಳಿಸಿದ್ದಾರೆ. ಶಿರೀಷಾ ಅವರ ಫೋನ್‌ನಲ್ಲಿ ಲಭ್ಯವಾದ ಮಾಹಿತಿ ತನಿಖೆಯಲ್ಲಿ ಪ್ರಗತಿಗೆ ಕಾರಣವಾಗುತ್ತದೆ ಎಂದು ಪೊಲೀಸರು ಭಾವಿಸುತ್ತಿದ್ದಾರೆ.
ಓದಿ: ಯುವತಿಯನ್ನು ಕಾರಿನಲ್ಲಿ ಸುತ್ತಾಡಿಸಿ ಕೊಂದು ಮ್ಯಾನ್‌ಹೋಲ್‌ಗೆಸೆದ ಅರ್ಚಕ: ಹೈದರಾಬಾದ್‌ನಲ್ಲೊಂದು ಭೀಕರ ಹತ್ಯೆ!