ನಾಗೌರ್ (ರಾಜಸ್ಥಾನ): ಮದುವೆ ಎಂದರೆ ಸಂಭ್ರಮ. ಇಡೀ ಬಂಧು ಬಳಗ ಒಟ್ಟಿಗೆ ಸೇರಿಕೊಂಡು ನವ ಜೋಡಿಯನ್ನು ಒಂದುಗೂಡಿಸುವ ಸಡಗರ. ಅದರಲ್ಲೂ, ಹಿಂದೂಗಳ ವಿವಾಹದಲ್ಲಿ ಅನೇಕ ರೀತಿ ವಿಭಿನ್ನವಾದ ಆಚರಣೆಗಳು ಇವೆ. ರಾಜಸ್ಥಾನದ ನಗೌರ್ ಜಿಲ್ಲೆಯಲ್ಲೂ ಇಂತಹದ್ದೇ ವಿಶಿಷ್ಟ ಮದುವೆ ಸಮಾರಂಭ ನಡೆದಿದೆ. ಇಲ್ಲಿನ ಬುರ್ಡಿ ಗ್ರಾಮದ ರೈತ ಕುಟುಂಬದ ಮೂವರು ಸಹೋದರರು ಯುವತಿಯ ಮದುವೆಗಾಗಿ ಮೂರು ಕೋಟಿ ರೂಪಾಯಿ ಉಡುಗೊರೆಯಾಗಿ ನೀಡಿದ್ದಾರೆ. ಇದು ಹೊಸ ಇತಿಹಾಸವನ್ನೇ ನಿರ್ಮಿಸಿದೆ.
ಬುಧವಾರ ಭನ್ವರ್‌ಲಾಲ್ ಗರ್ವಾ ಎಂಬುವವರ ಮೊಮ್ಮಗಳು ಅನುಷ್ಕಾ ಮತ್ತು ಧಿಂಗ್ಸಾರಿ ನಿವಾಸಿ ಕೈಲಾಶ್ ವಿವಾಹ ಸಮಾರಂಭ ಜರುಗಿದೆ. ಭನ್ವರ್‌ಲಾಲ್ ಗರ್ವಾ ತಮ್ಮ ಪುತ್ರಿಯ ಮಗಳಾದ ಅನುಷ್ಕಾ ಮದುವೆಗೆ ಭರ್ಜರಿ ಉಡುಗೊರೆ ನೀಡಿದ್ದಾರೆ. ಭನ್ವರ್‌ಲಾಲ್ ಗರ್ವಾ ಮತ್ತು ಅವರ ಮೂವರು ಮಕ್ಕಳಾದ ಹರೇಂದ್ರ, ರಾಮೇಶ್ವರ ಮತ್ತು ರಾಜೇಂದ್ರ ಸೇರಿಕೊಂಡು ಬರೋಬ್ಬರಿ 3.21 ಕೋಟಿ ರೂಪಾಯಿ ಬೆಲೆ ಬಾಳುವ ಕೃಷಿ ಭೂಮಿ, ಚಿನ್ನ - ಬೆಳ್ಳಿ ಆಭರಣ ಸೇರಿ ಅನೇಕ ವಸ್ತುಗಳನ್ನು ಕೊಟ್ಟಿದ್ದಾರೆ.
ಏನೆಲ್ಲ ಉಡುಗೊರೆ?: ಭನ್ವರ್‌ಲಾಲ್ ಗರ್ವಾ ಮತ್ತು ಮಕ್ಕಳು ರೈತರಾಗಿದ್ದಾರೆ. 3,500 ಬಿಘಾ ಕೃಷಿ ಭೂಮಿ ಹೊಂದುವ ಮೂಲಕ ಆರ್ಥಿಕವಾಗಿ ಸಬಲರೂ ಆಗಿದ್ದಾರೆ. ತಮ್ಮ ಸಹೋದರಿಯ ಮಗಳ ಮದುವೆಗಾಗಿ ಈ ಸಹೋದರರು ನೀಡಿರುವ 'ಮಯ್ರಾ' ಅಥವಾ 'ಮಾಮೆರಾ' ಸುತ್ತ - ಮುತ್ತಲಿನ ಗ್ರಾಮಸ್ಥರಲ್ಲಿ ಬೆರಗು ಮೂಡಿಸಿದೆ. 80 ಲಕ್ಷ ರೂಪಾಯಿ ನಗದು, 16 ಬಿಘಾ ಕೃಷಿ ಭೂಮಿ, 30 ಲಕ್ಷದ ನಿವೇಶನ, 41 ತೊಲ ಚಿನ್ನ, 3 ಕೆಜಿ ಬೆಳ್ಳಿ, ಭತ್ತ ತುಂಬಿದ ಟ್ರಾಲಿಯೊಂದಿಗೆ ಹೊಸ ಟ್ರ್ಯಾಕ್ಟರ್ ಹಾಗೂ ಒಂದು ಸ್ಕೂಟಿ ಕೊಟ್ಟಿದ್ದಾರೆ.
ಐನೂರರ ಕಂತೆ- ಕಂತೆ ನೋಟುಗಳು: ಮದುವೆಯಲ್ಲಿ ತಮ್ಮ ಸೊಸೆಗೆ ನೀಡಲು ಹರೇಂದ್ರ, ರಾಮೇಶ್ವರ ಹಾಗೂ ರಾಜೇಂದ್ರ ಉಡುಗೊರೆ ಸಮೇತವಾಗಿ ಆಗಮಿಸಿದ್ದರು. ಬಹಿರಂಗವಾಗಿ ಎಲ್ಲ ಜನರ ಮುಂದೆಯೇ ತಮ್ಮ ತಂದೆ ಭನ್ವರ್‌ಲಾಲ್ ಗರ್ವಾ ಅವರ ಮೂಲಕ ಬೆಲೆ ಬಾಳುವ ವಸ್ತುಗಳನ್ನು ಹಸ್ತಾಂತರಿಸಿದ್ದಾರೆ. ತಟ್ಟೆಯಲ್ಲಿ ಚಿನ್ನದ ನಾಣ್ಯಗಳನ್ನು ಇರಿಸಿದ್ದರು. 80 ಲಕ್ಷ ರೂಪಾಯಿ ನಗದನ್ನು ಐನೂರರ ಕಂತೆ - ಕಂತೆ ನೋಟುಗಳಲ್ಲಿ ಜೋಡಿಸಿದ್ದರು. ಜೊತೆಗೆ ನಿವೇಶನ, ಕೃಷಿ ಭೂಮಿ ದಾಖಲೆ ಪತ್ರಗಳನ್ನು ಎಲ್ಲರಿಗೂ ತೋರಿಸಿದರು. ಈ ಎಲ್ಲ ಉಡುಗೊರೆಗಳನ್ನು ಭನ್ವರ್‌ಲಾಲ್ ಗರ್ವಾ ತಮ್ಮ ತಲೆ ಹೊತ್ತುಕೊಂಡು ನಂತರ ಮೊಮ್ಮಗಳಿಗೆ ತಲುಪಿಸಿದರು.
ಏನಿದು 'ಮಯ್ರಾ'? : ರಾಜಸ್ಥಾನದ ಹಿಂದೂಗಳ ವಿವಾಹ ಸಮಾರಂಭಗಳಲ್ಲಿ ಮಯ್ರಾ ಎಂಬ ಸಂಪ್ರದಾಯ ಚಾಲ್ತಿಯಲ್ಲಿದೆ. ಪ್ರಾಚೀನ ಕಾಲದಲ್ಲಿ ಮಹಿಳೆಯರಿಗೆ ತಮ್ಮ ತಂದೆಯ ಆಸ್ತಿಯಲ್ಲಿ ಯಾವುದೇ ಹಕ್ಕು ಇರಲಿಲ್ಲ. ಇಡೀ ಆಸ್ತಿ ಸಹೋದರರ ಹೆಸರಿಗೆ ಮಾತ್ರ ಹೋಗುತ್ತಿತ್ತು. ಆದ್ದರಿಂದ, ಮಹಿಳೆಯ ಕುಟುಂಬಸ್ಥರು ಅಥವಾ ಸಹೋದರರು ತಮ್ಮ ಸೊಸೆಯಂದಿರು ಮತ್ತು ಸೋದರಳಿಯರ ವಿವಾಹಗಳಲ್ಲಿ ಉಡುಗೊರೆಗಳನ್ನು ನೀಡುವ ಮೂಲಕ ಔದಾರ್ಯ ತೋರಿಸುತ್ತಾರೆ.
ಈ ಬಗ್ಗೆ ಭನ್ವರ್‌ಲಾಲ್ ಗರ್ವಾ ಮಾತನಾಡಿ, "ಇದು ನನ್ನ ಮೊಮ್ಮಗಳ ಮದುವೆಯನ್ನು ಸ್ಮರಣೀಯವಾಗಿಸಲು ನಾನು ಬಯಸುತ್ತೇನೆ. ನಾನು ನನ್ನ ಕೈಲಾದಷ್ಟು ಕೊಟ್ಟಿದ್ದೇನೆ. ವಧು ಮತ್ತು ವರ ಇಬ್ಬರೂ ಸಂತೋಷವಾಗಿರುತ್ತಾರೆ ಎಂದು ನಾನು ನಂಬಿದ್ದೇನೆ. ಅವರ ದಾಂಪತ್ಯ ಜೀವನ ಸುಖಮಯವಾಗಿರಲಿ ಎಂದು ಹಾರೈಸುತ್ತೇನೆ ಎಂದು ತಿಳಿಸಿದ್ದಾರೆ. ಇನ್ನು, ಮಯ್ರಾ ಸಂಪ್ರದಾಯದ ಭಾಗವಾಗಿ ಕೋಟಿ ರೂಪಾಯಿವರೆಗೂ ಉಡುಗೊರೆಗಳು ನೀಡಿದ ನಿದರ್ಶನಗಳು ಇವೆ. ಆದರೆ, ಮೂರು ಕೋಟಿಯಷ್ಟು ಮಯ್ರಾ ನೀಡಿದ್ದು ಇದೇ ಮೊದಲು ಎನ್ನಲಾಗುತ್ತಿದೆ.
ಇದನ್ನೂ ಓದಿ: 21 ಸಾವಿರ ಬಡ ಹೆಣ್ಣುಮಕ್ಕಳಿಗೆ ಮದುವೆ ಮಾಡಿಸಿದ ಸಚಿವ ಗೋಪಾಲ್ ಭಾರ್ಗವ.. ಈಡೇರಿದ ಸಂಕಲ್ಪ