ರಾಯಪುರ(ಛತ್ತೀಸ್ಗಢ): ಉತ್ತರ ಭಾರತದಲ್ಲಿ ಅತಿ ಹೆಚ್ಚು ಅರಣ್ಯ ಪ್ರದೇಶ ಹೊಂದಿರುವ ಛತ್ತೀಸ್ಗಢ ಪ್ರಾಕೃತಿಕ ಸೌಂದರ್ಯದಿಂದ ಹೆಸರುವಾಸಿಯಾಗಿದೆ. ರಾಜ್ಯದಲ್ಲಿ ಹೆಚ್ಚಾಗಿ ಮಳೆಕಾಡುಗಳೇ ಕಂಡು ಬರುತ್ತವೆ. ಮಳೆಗಾಲದ ವೇಳೆ ಇಲ್ಲಿನ ಜಲಪಾತಗಳು ಮೈದುಂಬಿ ಹರಿಯುತ್ತವೆ.
ಇಲ್ಲಿನ ಸರ್ಗುಜಾ ಜಿಲ್ಲೆಯೂ ವಿಶಿಷ್ಟ ಕಾರಣಕ್ಕೆ ಹೆಸರುವಾಸಿಯಾಗಿದೆ. ಸಮುದ್ರ ಮಟ್ಟದಿಂದ ಮೂರೂವರೆ ಸಾವಿರ ಅಡಿಯಷ್ಟು ಎತ್ತರದಲ್ಲಿರುವ ಮನ್ಪತ್ ಎಂಬ ಗ್ರಾಮವು ಛತ್ತೀಸ್ಗಢದ ಶಿಮ್ಲಾ ಅಂತಲೇ ಪ್ರಸಿದ್ಧಿಯಾಗಿದೆ. ಇಷ್ಟೇ ಅಲ್ಲ,1962ರಲ್ಲಿ ಟಿಬೆಟಿಯನ್ನರು ಇಲ್ಲಿ ನಿರಾಶ್ರಿತರಾಗಿ ಬಂದು ನೆಲೆಸಿದ್ದರಂತೆ.
ಆದ್ದರಿಂದ ಈ ಸ್ಥಳಕ್ಕೆ ಚೋಟಾ ಟಿಬೆಟ್ ಅಂತಲೂ ಕರೆಯುತ್ತಾರೆ. ಅಲ್ಲದೇ ಟಿಬೆಟಿಯನ್ ಧರ್ಮ ಗುರು ದಲೈಲಾಮಾ ಎರಡು ಬಾರಿ ಇಲ್ಲಿಗೆ ಬಂದಿದ್ದರಂತೆ. ಹೀಗಾಗಿ, ಇಲ್ಲಿ ಬೌದ್ಧ ದೇವಾಲಯ ಸಹ ಇದ್ದು, ಶಾಂತಿ ಬಯಸುವವರ ನೆಚ್ಚಿನ ತಾಣವಾಗಿದೆ.
ಸರ್ಗುಜಾ ಜಿಲ್ಲೆಯಲ್ಲಿ ನೆಲೆಸಿದ್ದ ಟಿಬೆಟ್ ಸಮುದಾಯ ಇಲ್ಲಿನ ಬುಡಕಟ್ಟು ಜನಾಂಗದವರಿಗೆ ಕಾರ್ಪೆಟ್ ಕೆಲಸವನ್ನ ಕಲಿಸಿದ್ದರು. ಈ ಕಾರ್ಪೆಟ್ ತಯಾರಿಕೆಗಾಗಿ ಉಣ್ಣೆ ಹಾಗೂ ದಾರವನ್ನ ಬಳಸಲಾಗುತ್ತದೆ. ಇದರಿಂದ ಗ್ರಾಮದಲ್ಲಿ ನೂರಾರು ಮಂದಿ ಉದ್ಯೋಗ ಕಂಡುಕೊಂಡಿದ್ದಾರೆ.
ಅಚ್ಚರಿ ಎಂದರೆ ಈ ಕಾರ್ಪೆಟ್ಗಳು ಖಾದಿ ಇಂಡಿಯಾ ಸೇರಿದಂತೆ 4 ಇ ಕಾಮರ್ಸ್ ವೆಬ್ಸೈಟ್ನಲ್ಲೂ ಮಾರಾಟವಾಗುತ್ತಿವೆ. ಇದ್ರಿಂದ ಸರ್ಗುಜಾ ಜಿಲ್ಲೆಯಲ್ಲಿ ಕುಳಿತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತಮ್ಮ ಉತ್ಪನ್ನ ಮಾರುವಂತಾಗಿದೆ.
ಇಲ್ಲಿ ತಯಾರಾದ ಉತ್ಪನ್ನಗಳನ್ನ ಭಾರತೀಯ ಆಡಳಿತ ಸೇವಾ ಅಕಾಡೆಮಿಯೂ ದೃಢೀಕರಿಸಿದೆ. ಅಲ್ಲದೇ ಬುಡಕಟ್ಟು ಮಹಿಳೆಯರಿಗೆ 68 ಕಾರ್ಪೆಟ್ ತಯಾರಿಸಲು ಭಾರತೀಯ ಆಡಳಿತ ಸೇವಾ ಅಕಾಡೆಮಿ ಆರ್ಡರ್ ನೀಡಿತ್ತು. ಇದರ ಒಟ್ಟು ಮೊತ್ತ ಸುಮಾರು 4 ಲಕ್ಷ ರೂಪಾಯಿ ಎನ್ನಲಾಗಿದೆ.
ಕಾರ್ಪೆಟ್ ನೇಕಾರರಿಗೆ ನಿಯಮಿತವಾಗಿ ಉದ್ಯೋಗ ನೀಡುವ ಸಲುವಾಗಿ, ಎರಡು ದಶಕಗಳಿಂದ ಮುಚ್ಚಲ್ಪಟ್ಟಿದ್ದ ಪ್ರಸಿದ್ಧ ಟಿಬೆಟಿಯನ್ ಮಾದರಿಯ ಕಾರ್ಪೆಟ್ ಉದ್ಯಮವನ್ನು ಮತ್ತೆ ಆರಂಭಿಸುವ ಕಾರ್ಯ ಸಾಗುತ್ತಿದೆ.
ಆಕರ್ಷಕ ಮತ್ತು ನೈಸರ್ಗಿಕ ದಾರದಿಂದಾಗಿ, ಅದರ ಜನಪ್ರಿಯತೆಯು ದಿನದಿಂದ ದಿನಕ್ಕೆ ಹೆಚ್ಚುತ್ತಲಿದೆ. ಇಲ್ಲಿನ ಶಬರಿ ಕಾರ್ಪೆಟ್ ಎಂಪೋರಿಯಮ್ನಲ್ಲಿ ಆಕರ್ಷಕ ಬೆಲೆಗೆ ನಿಮಗಿಷ್ಟದ ಕಾರ್ಪೆಟ್ ಕೊಂಡುಕೊಳ್ಳಬಹುದಾಗಿದೆ.