ಶ್ರೀನಗರ (ಜಮ್ಮಿ ಮತ್ತು ಕಾಶ್ಮೀರ): ಪೊಲೀಸ್ ಕಾನ್ಸ್ಟೇಬಲ್ ಮನೆಗೆ ನುಗ್ಗಿದ ಉಗ್ರರು ಪೊಲೀಸ್ ಸಿಬ್ಬಂದಿ ಪತ್ನಿ ಹಾಗೂ ಮಗಳ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ಅನಂತನಾಗ್ ಜಿಲ್ಲೆಯಲ್ಲಿ ನಡೆದಿದೆ. ಘಟನೆಯಲ್ಲಿ ಇಬ್ಬರಿಗೂ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಇಲ್ಲಿನ ವೆರಿನಾಗ್ನಲ್ಲಿ ಪೊಲೀಸ್ ಕಾನ್ಸ್ಟೇಬಲ್ ಸಾಜ್ಹಾದ್ ಅಹ್ಮದ್ ಮಲಿಕ್ ಅವರ ಮನೆಗೆ ನುಗ್ಗಿದ್ದ ಉಗ್ರರು ಪತ್ನಿ ನಾಹಿದಾ ಜಾನ್ ಮತ್ತು ಪುತ್ರಿ ಮದಿಯಾ ಮೇಲೆ ಗುಂಡು ಹಾರಿಸಿದ್ದಾರೆ.
ತಕ್ಷಣವೇ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅದೃಷ್ಟವಶಾತ್ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಲ್ಲದೇ ಪೊಲೀಸ್ ಕಾನ್ಸ್ಟೇಬಲ್ ಮೇಲೆ ದಾಳಿ ಮಾಡಲು ಮನೆಗೆ ಬಂದಿದ್ದ ಉಗ್ರರು ಕುಟುಂಬಸ್ಥರ ಮೇಲೆ ದಾಳಿ ಮಾಡಿದ್ದಾರೆ. ಉಗ್ರರು ಮನೆಗೆ ನುಗ್ಗಿದ್ದಾಗ ಕಾನ್ಸ್ಟೇಬಲ್ ಅಹ್ಮದ್ ಮನೆಯಲ್ಲಿರಲಿಲ್ಲ ಎಂದು ತಿಳಿದು ಬಂದಿದೆ.
ದಾಳಿ ಮಾಡಿದ್ದ ಉಗ್ರರರನ್ನು ಜೈಶ್-ಎ- ಮೊಹಮ್ಮದ್ ಸಂಘಟನೆಯವರು ಇರಬಹುದು ಎಂದು ಪೊಲೀಸರು ಶಂಕಿಸಲಾಗಿದೆ. ಘಟನೆ ಸಂಬಂಧ ಅಹ್ಮದ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಉಗ್ರರಿಗಾಗಿ ಹುಡುಕಾಟ ತೀವ್ರಗೊಂಡಿದೆ.