ನವದೆಹಲಿ: ಪಾಕಿಸ್ತಾನದ ಗೂಢಚಾರ ಸಂಸ್ಥೆ ಐಎಸ್‌ಐ, ಪುಲ್ವಾಮಾ ಮಾದರಿಯಲ್ಲಿ ಆತ್ಮಹುತಿ ದಾಳಿ ನಡೆಸುವ ಕಾರ್ಯತಂತ್ರದ ಬೆಂಬಲವನ್ನು ಜೈಶ್-ಇ-ಮೊಹಮ್ಮದ್‌ಗೆ ನೀಡಿತ್ತು ಎಂದು ಭಾರತದ ಗುಪ್ತಚರ ಇಲಾಖೆಯ ಮೂಲಗಳು ತಿಳಿಸಿವೆ.
ಪುಲ್ವಾಮಾ ಮಾದರಿಯ ದಾಳಿಗೆ ಸಂಚು ರೂಪಿಸಿದ ಪಾಕ್ನ ಐಎಸ್ಐ, ನಾಲ್ಕು ಭಯೋತ್ಪಾದಕರು ಸಾಂಬಾ ವಲಯದಿಂದ ಭಾರತಕ್ಕೆ ಒಳನುಸುಳಿಸಲು ಸಹಕಾರ ನೀಡಿತ್ತು. ನವೆಂಬರ್ 18/19 ರಂದು ಜಮ್ಮು ವಲಯದ ನಾಗ್ರೋಟಾ ಬಳಿ ಭಾರತದ ಭದ್ರತಾ ಪಡೆ ನಾಲ್ವರನ್ನು ಎನ್ಕೌಂಟರ್ ಮಾಡಿ ಹೊಡೆದುರಿಳಿಸಿತ್ತು.
ಪುಲ್ವಾಮಾ ಪ್ರಮಾಣದ ಭಯೋತ್ಪಾದಕ ದಾಳಿ ನಡೆಸಲು ಮೌಲಾನಾ ಮಸೂದ್ ಅಜರ್ ನೇತೃತ್ವದ ಜೈಶ್-ಇ-ಮೊಹಮ್ಮದ್‌ಗೆ ಪಾಕಿಸ್ತಾನ ಸೇನೆಯ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ ಸಹಕಾರ ನೀಡಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಇಡೀ ದಾಳಿಯನ್ನು ನಡೆಸಲು ಆಯ್ಕೆ ಮಾಡಿದ ವ್ಯಕ್ತಿ ಅಜರ್ ಅವರ ಸಹೋದರ ಅಬ್ದುಲ್ ರವೂಫ್ ಅಸ್ಗರ್ ಎಂಬುದು ತಿಳಿದುಬಂದಿದೆ. ಭಾರತದ ಗಡಿಯ ಸಮೀಪ ಪಾಕಿಸ್ತಾನದ ಜೈಶ್‌ನ ಶಕರ್ಘರ್ ಶಿಬಿರದಿಂದ ನಾಲ್ಕು ಜಿಹಾದಿಗಳನ್ನು ಆಯ್ಕೆ ಮಾಡಿದ್ದರು. ದಾಳಿ ಯೋಜಿಸಲು ಜೈಶ್‌ನ ಮತ್ತೊಂದು ಭಯೋತ್ಪಾದಕ ಖಾಜಿ ತಾರಾರ್‌ನನ್ನು ಅಸ್ಗರ್ ಅವರೊಂದಿಗೆ ನಿಯೋಜಿಸಲಾಗಿತ್ತು.
ಬಹವಾಲ್ಪುರದ ಜೈಶ್ ಪ್ರಧಾನ ಕಚೇರಿಯಲ್ಲಿ ಸಭೆ ನಡೆಸಲಾಯಿತು. ಜೈಶ್ ಭಯೋತ್ಪಾದಕ ಜಾಲದ ಮೌಲಾನಾ ಅಬು ಜುಂಡಾಲ್ ಮತ್ತು ಮುಫ್ತಿ ಟೌಸೆಫ್ ಮತ್ತು ಮೇಲಿನ ಇಬ್ಬರು ಹಾಗೂ ಐಎಸ್ಐ ಅಧಿಕಾರಿಗಳು ಒಳಗೊಂಡಿದ್ದರು ಎಂದು ಮೂಲಗಳು ತಿಳಿಸಿವೆ.
ಆರಂಭಿಕ ಯೋಜನೆ ಮಾಡಿದ ನಂತರ, ಭಯೋತ್ಪಾದಕರ ಆಯ್ಕೆ ಮತ್ತು ಅವರ ತರಬೇತಿ ಸೇರಿದಂತೆ ಅಂತಿಮ ಸಿದ್ಧತೆಗಳನ್ನು ಕೈಗೊಳ್ಳಲು ಜೈಶ್‌ನ ಶಕರ್‌ಗಘ್ ಘಟಕಕ್ಕೆ ವರ್ಗಾಯಿಸಲಾಯಿತು.
ನಾಲ್ವರು ಭಯೋತ್ಪಾದಕರು ಆತ್ಮಾಹುತಿ ದಾಳಿ ತರಬೇತಿ ಪಡೆದು, ಕಾಶ್ಮೀರ ಕಣಿವೆಯಲ್ಲಿನ ಭಾರತೀಯ ಪಡೆಗಳ ಮೇಲೆ ಮುಗಿಬಿದ್ದು ದೊಡ್ಡ ಪ್ರಮಾಣದಲ್ಲಿ ಹಾನಿಯನ್ನುಂಟುಮಾಡಲು ಸಜ್ಜಾಗಿದ್ದರು. ಇದೆಲ್ಲವನ್ನು ಭಾರತೀಯ ಪಡೆ ನುಚ್ಚುನೂರು ಮಾಡಿದೆ.