ಜಮ್ಮು: ಉಗ್ರರು ನಡೆಸಿದ ಅಮಾನವೀಯ ದಾಳಿಯಲ್ಲಿ ಇಬ್ಬರು ಮಕ್ಕಳು ಸೇರಿದಂತೆ 6 ಜನರು ಸಾವನ್ನಪ್ಪಿದ್ದ ಘಟನೆಗಳ ಬೆನ್ನಲ್ಲೇ ಅವಳಿ ಗಡಿ ಜಿಲ್ಲೆಗಳಾದ ರಾಜೌರಿ ಮತ್ತು ಪೂಂಚ್‌ನಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಇದೀಗ ಎರಡು ಸಾವಿರಕ್ಕೂ ಅಧಿಕ ಸಿಆರ್ಪಿಎಫ್ ಸಿಬ್ಬಂದಿಯನ್ನು 20 ತುಕಡಿಗಳಾಗಿ ಈ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ. ಪೂಂಚ್ ಮತ್ತು ರಾಜೌರಿ ಪ್ರದೇಶಗಳಲ್ಲಿ ಎರಡು ದಿನದ ಅಂತರದಲ್ಲಿ 2 ಪ್ರತ್ಯೇಕ ದಾಳಿ ನಡೆಸಲಾಗಿತ್ತು.
ಈ ದಾಳಿಗಳಲ್ಲಿ ಇಬ್ಬರು ಮಕ್ಕಳು ಸೇರಿದಂತೆ 6 ನಾಗರಿಕರು ಸಾವನ್ನಪ್ಪಿದ್ದು, 11 ಮಂದಿ ಗಾಯಗೊಂಡಿದ್ದರು. ದಾಳಿಯ ಬಳಿಕ ಜನರು ತೀವ್ರ ಆತಂಕಕ್ಕೀಡಾಗಿದ್ದರು. ಇದರ ವಿರುದ್ಧ ಪ್ರತಿಭಟನೆಗಳನ್ನು ಕೂಡ ನಡೆಸಿದ್ದರು. ತಕ್ಷಣವೇ ಎಚ್ಚೆತ್ತಿರುವ ಕೇಂದ್ರ ಸರ್ಕಾರ ಸಿಆರ್ಪಿಎಫ್ ಯೋಧರನ್ನು ಗಡಿಪ್ರದೇಶಗಳಲ್ಲಿ ಹೆಚ್ಚಿಸಿದೆ.
ಜಮ್ಮು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ: ರಾಜೌರಿ ಜಿಲ್ಲೆಯ ಡ್ಯಾಂಗ್ರಿಯಲ್ಲಿ ಹೊಸ ವರ್ಷದ ಮೊದಲ ದಿನದಂದೇ ನುಗ್ಗಿರುವ ಉಗ್ರರು ಅಲ್ಲಿನ ಮನೆಗಳಿಗೆ ತೆರಳಿ ಆಧಾರ್ ಕಾರ್ಡ್ ನೋಡುವ ನೆಪದಲ್ಲಿ ಗುಂಡಿನ ದಾಳಿ ನಡೆಸಿದ್ದರು. ಗುಂಡೇಟಿಗೆ ನಾಲ್ವರು ನಾಗರಿಕರು ಮೃತಪಟ್ಟಿದ್ದರೆ, 6 ಮಂದಿ ಗಾಯಗೊಂಡಿದ್ದರು. ಇದಾದ ಒಂದು ದಿನದ ಬಳಿಕ ಸುಧಾರಿತ ಸ್ಫೋಟಕ(ಐಇಡಿ) ಸಿಡಿದು ಇಬ್ಬರು ಮಕ್ಕಳು ಸಾವನ್ನಪ್ಪಿದ್ದರು.
24 ಗಂಟೆಯಲ್ಲಿ ನಡೆದ 2 ದಾಳಿಗಳಿಂದ ತೀವ್ರ ಆತಂಕ ಉಂಟು ಮಾಡಿತ್ತು. ಭದ್ರತೆ ನೀಡದ ಲೆಫ್ಟಿನೆಂಟ್ ಗವರ್ನರ್ ಮತ್ತು ಆಡಳಿತದ ವಿರುದ್ಧ ತೀವ್ರ ಪ್ರತಿಭಟನೆ ವ್ಯಕ್ತವಾಗಿತ್ತು. ಇದು ಭದ್ರತಾ ಏಜೆನ್ಸಿಗಳ ಮತ್ತು ಪೊಲೀಸರ ಬಹುದೊಡ್ಡ ಲೋಪ ಎಂಬ ಆರೋಪ ಕೇಳಿಬಂದಿತ್ತು.
ಉಗ್ರರ ಮಾಹಿತಿ ಕೊಟ್ಟವರಿಗೆ ಬಹುಮಾನ: ಎರಡು ದಾಳಿಯಿಂದಾಗಿ ಆ ಪ್ರದೇಶದಲ್ಲಿ ಭೀತಿ ಉಂಟಾಗಿದ್ದು, ಭದ್ರತೆ ನೀಡಲು ಜನರು ಆಗ್ರಹಿಸಿದ್ದರು. ಕಾರ್ಯಪ್ರವೃತ್ತವಾಗಿದ್ದ ಸೇನಾಧಿಕಾರಿಗಳು ಉಗ್ರರ ಮಾಹಿತಿ ನೀಡಿದವರಿಗೆ 10 ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದು ಎಂದು ಘೋಷಿಸಿದ್ದಾರೆ. ದಾಳಿ ನಡೆದ ಬಳಿಕ ಕಾರ್ಯಾಚರಣೆ ನಡೆಸಿದರೂ ಉಗ್ರರು ಪತ್ತೆಯಾಗಿಲ್ಲ. ಹೀಗಾಗಿ ಅವರ ಸುಳಿವು ನೀಡಿದವರಿಗೆ ಆಡಳಿತ ಬಹುಮಾನ ನೀಡಲಿದೆ ಎಂದು ಘೋಷಿಸಲಾಗಿದೆ.
'ಶಸ್ತ್ರಸಜ್ಜಿತ ಉಗ್ರರು ಇನ್ನೂ ಇದೇ ಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದಾರೆ. ಅವರ ಪತ್ತೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ. ಮಕ್ಕಳು ಸೇರಿದಂತೆ 6 ನಾಗರಿಕರ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲಾಗುವುದು' ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.
ಕಾಶ್ಮೀರಿ ಪಂಡಿತರ ಹತ್ಯೆಗೆ ನ್ಯಾಯ: ಡಿಸೆಂಬರ್ 31 ಮತ್ತು ಜನವರಿ 1 ರ ನಡುವೆ 24 ಗಂಟೆಗಳ ಅವಧಿಯಲ್ಲಿ 6 ಕಾಶ್ಮೀರಿ ಪಂಡಿತರನ್ನು ಉಗ್ರಗಾಮಿಗಳು ಹತ್ಯೆ ಮಾಡಿದ್ದಾರೆ. ದಾಳಿಯ ನಂತರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಸಂತ್ರಸ್ತರ ಕುಟುಂಬಗಳನ್ನು ಭೇಟಿ ನೀಡಿ, ಸಾಂತ್ವನ ಹೇಳಿದ್ದರು.
ಇದೇ ವೇಳೆ ಮಾತನಾಡಿದ ಅವರು, 'ಉಗ್ರಗಾಮಿಗಳನ್ನು ಹರಣ ಮಾಡಲು ಭದ್ರತಾ ಪಡೆಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಪಂಡಿತರ ಹತ್ಯೆ ಮಾಡಿದ ಉಗ್ರರ ಹೆಡೆಮುರಿ ಕಟ್ಟಲಾಗುವುದು ಎಂದು ಎಂದು ಭರವಸೆ ನೀಡಿದ್ದರು. ಭಯೋತ್ಪಾದಕರನ್ನು ಮತ್ತು ಇಡೀ ಭಯೋತ್ಪಾದಕ ವ್ಯವಸ್ಥೆಯನ್ನು ಹತ್ತಿಕ್ಕುವುದು ನಮ್ಮ ಸಂಕಲ್ಪವಾಗಿದೆ' ಎಂದು ಹೇಳಿದ್ದಾರೆ.
ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನೆ ದಾಳಿ: ಉಗ್ರಗಾಮಿಗಳ ಮಾಹಿತಿ ಕೊಟ್ಟವರಿಗೆ ಪೊಲೀಸರು 10 ಲಕ್ಷ ಬಹುಮಾನ ಘೋಷಣೆ