ಶಿವಗಂಗಾ (ತಮಿಳುನಾಡು): ತಮಿಳುನಾಡಿನ ತಿರುಪ್ಪುವನಂ ತಹಸಿಲ್‌ನಲ್ಲಿರುವ ಕೀಲಾಡಿಯಲ್ಲಿ ನಡೆಯುತ್ತಿರುವ ಉತ್ಖನನ ಕಾರ್ಯದಲ್ಲಿ ಹತ್ತು ಸಾವಿರ ಪುರಾತತ್ತ್ವ ಶಾಸ್ತ್ರದ ಕಲಾಕೃತಿಗಳು ಸಿಕ್ಕಿವೆ.
2014ರಿಂದ ಶಿವಗಂಗಾ ಜಿಲ್ಲೆಯ ಕೀಲಾಡಿಯಲ್ಲಿ ಉತ್ಖನನ ಕಾರ್ಯ ನಡೆಯುತ್ತಿದೆ. ಮೊದಲ ಮೂರು ಹಂತದ ಉತ್ಖನನ ಕಾರ್ಯವನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ನಡೆಸಿದರೆ, ನಾಲ್ಕನೇ ಹಂತದ ಉತ್ಖನನದಿಂದ ಪ್ರಸ್ತುತ ಒಂಬತ್ತನೇ ಹಂತದ ಉತ್ಖನನದವರೆಗೆ ತಮಿಳುನಾಡು ರಾಜ್ಯ ಪುರಾತತ್ವ ಇಲಾಖೆಯು ಕೆಲಸ ನಿರ್ವಹಿಸುತ್ತಿದೆ.
ಉತ್ಖನನದ ವೇಳೆ ಸಿಕ್ಕಿದ್ದೇನು?: "ಪುರಾತನ ಬಾವಿಗಳು, ಪಾಚಿಯ ಮಣಿಗಳು, ಕಪ್ಪು ಮತ್ತು ಕೆಂಪು ಮಡಿಕೆಗಳು, ಅಕ್ಷರಗಳನ್ನು ಕೆತ್ತಿದ ಮಡಿಕೆಗಳು, ಮಡಿಕೆಗಳು ಮತ್ತು ಮಾನವ ಅಸ್ಥಿಪಂಜರಗಳಂತಹ ವಿವಿಧ ಪ್ರಾಚೀನ ಚಿಹ್ನೆಗಳನ್ನು ಒಳಗೊಂಡಿರುವ ಕಲಾಕೃತಿಗಳು ಉತ್ಖನನದ ವೇಳೆ ಲಭಿಸಿವೆ. ಇದರ ಜೊತೆಗೆ, ವಿವಿಧ ಗಾತ್ರದ ಕಪ್ಪು ಕಲ್ಲಿನ ತೂಕಗಳು ಪತ್ತೆಯಾಗಿವೆ. ಇತ್ತೀಚೆಗೆ, 8 ಗ್ರಾಂ ತೂಕದ ಸ್ಫಟಿಕದ ಶಿಲೆ ಕಂಡುಬಂದಿದೆ. ಸ್ಫಟಿಕ ಶಿಲೆಯ ರೂಪದಲ್ಲಿ ತೂಕದ ಕಲ್ಲು ಕಂಡುಬಂದಿರುವುದು ಇದೇ ಮೊದಲು" ಎಂದು ಪುರಾತತ್ವಜ್ಞರು ತಿಳಿಸಿದರು.
ಪುರಾತತ್ವ ಇಲಾಖೆಯ ನಿರ್ದೇಶಕರ ಪ್ರತಿಕ್ರಿಯೆ: ಭೂಮಿ ಆಳದಲ್ಲಿ ಸಿಕ್ಕ ಮಡಿಕೆ ರೀತಿಯ ಇರುವಂತಹ ಚೂರುಗಳನ್ನು ವಿಂಗಡಿಸಿ ನೋಡಿದಾಗ ಸ್ವಲ್ಪ ಮುರಿದ ಟೆರಾಕೋಟಾ ಹಾವಿನ ಹೆಡೆ ಪತ್ತೆಯಾಗಿದೆ. ಇದು ಕೈಯಿಂದ ಮಾಡಿದ ಟೆರಾಕೋಟಾ ಹಾವಿನ ಹೆಡೆಯಾಗಿದೆ. ಹಾವಿನ ಕಣ್ಣುಗಳು ಮತ್ತು ಬಾಯಿಯನ್ನು ಆಕರ್ಷಕವಾಗಿ ಸಂಪೂರ್ಣವಾಗಿ ರಚಿಸಲಾಗಿದೆ. ಕಲಾಕೃತಿಯು ಒರಟಾದ ಮೇಲ್ಮೈಯೊಂದಿಗೆ ಕೆಂಪು ಲೇಪನ ಹೊಂದಿದೆ. ಇದರ ಉದ್ದ 8.5 ಸೆಂ.ಮೀ, ಅಗಲ, 5.4 ಸೆಂ.ಮೀ ಮತ್ತು 1.5 ಸೆಂ.ಮೀ ದಪ್ಪ ಹೊಂದಿದೆ. ಟೆರಾಕೋಟಾ ಆಕೃತಿಯೊಂದಿಗೆ ಮಣ್ಣಿನ ಸಿದ್ಧಪಡಿಸಿದ ಚೆಂಡು, ದುಂಡಗಿನ ಕಲ್ಲುಗಳು, ಕಬ್ಬಿಣದ ಮೊಳೆಗಳು ಮತ್ತು ಕೆಂಪು ಲೇಪನವಿರುವ ಕಪ್ಪು ಮತ್ತು ಕೆಂಪು ಬಣ್ಣದ ಮಡಿಕೆಗಳು ದೊರೆತಿವೆ ಎಂದು ತಮಿಳುನಾಡು ರಾಜ್ಯ ಪುರಾತತ್ವ ಇಲಾಖೆಯ ನಿರ್ದೇಶಕ ಶಿವಾನಂದಂ ಮಾಹಿತಿ ನೀಡಿದ್ದಾರೆ.
ಸುಮಾರು 2,000 ವರ್ಷಗಳಷ್ಟು ಹಿಂದಿನದು!: ಈ ಹಿಂದೆ, ಮಾನವನ ಆಕೃತಿಗಳು ಹಾಗೂ ಪ್ರಾಣಿಗಳ ಆಕೃತಿಗಳೊಂದಿಗೆ ವಿವಿಧ ರೀತಿಯ ಮಣ್ಣಿನ ಶಿಲ್ಪಗಳು ಇಲ್ಲಿ ಕಂಡುಬಂದಿದ್ದವು. ಆದರೆ, ಮೊದಲ ಬಾರಿಗೆ ಟೆರಾಕೋಟಾ ಹಾವಿನ ತಲೆಯಿರುವ ಶಿಲ್ಪ ಸಿಕ್ಕಿದೆ. ಕೈಗಳಿಂದ ಅತ್ಯಂತ ಸೂಕ್ಷ್ಮವಾಗಿ ರಚಿಸಲಾದ ಈ ಶಿಲ್ಪವು ಸುಮಾರು 2,000 ವರ್ಷಗಳ ಹಿಂದಿನ ಜೀವನದ ಕುರಿತು ಉದಾಹರಣೆಯನ್ನು ಸೂಚಿಸುತ್ತದೆ ಎಂದು ಪುರಾತತ್ವಶಾಸ್ತ್ರಜ್ಞರು ಹೇಳಿದ್ದಾರೆ.
ಇದನ್ನೂ ಓದಿ: ಚಂದ್ರನಿಗೆ 1,500 ಕಿಮೀ ಹತ್ತಿರ ತಲುಪಿದ Chandrayaan-3; ಇಸ್ರೊದ 3ನೇ ಹಂತದ ಕಾರ್ಯಾಚರಣೆ ಯಶಸ್ವಿ