ನಾಗಾಂವ್(ಅಸ್ಸೋಂ): ಲಾಕಪ್ ಡೆತ್ ಆರೋಪದ ಮೇಲೆ ಉದ್ವಿಗ್ನಗೊಂಡ ಜನರು ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಘಟನೆ ಅಸ್ಸೋಂನ ನಾಗಾಂವ್ನಲ್ಲಿ ನಡೆದಿದೆ. ಈ ವೇಳೆ ನಡೆದ ಗಲಾಟೆಯಲ್ಲಿ ಇಬ್ಬರು ಪೊಲೀಸರು ಸೇರಿದಂತೆ ಹಲವರಿಗೆ ಗಾಯಗಳಾಗಿವೆ.
ನಾಗಾಂವ್ನ ಬಾಟದ್ರವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಸ್ಲಾಂ ಎಂಬ ಯುವಕ ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದಾನೆ. ಪೊಲೀಸರು ಆರೋಪಿಯನ್ನು ಕ್ರೂರವಾಗಿ ಥಳಿಸಿದ ಕಾರಣ ಸಾವನ್ನಪ್ಪಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಘಟನೆ ಏನು?: ವ್ಯಾಪಾರಿಯಾಗಿದ್ದ ಇಸ್ಲಾಂನನ್ನು ಪೊಲೀಸರು ಯಾವುದೋ ಅಪರಾಧದ ಮೇಲೆ ಬಂಧಿಸಿದ್ದಾರೆ. ಬಳಿಕ ಬಿಡುಗಡೆಗಾಗಿ 10 ಸಾವಿರ ಮತ್ತು 1 ಬಾತುಕೋಳಿ ನೀಡಲು ಲಂಚ ಕೇಳಿದ್ದಾರೆ. ಇಸ್ಲಾಂ ಪತ್ನಿ ಬಾತುಕೋಳಿ ನೀಡಲೊಪ್ಪಿ, ಹಣದ ಸಮಸ್ಯೆ ಕಾರಣ ಕೊಡಲಾಗಲ್ಲ ಎಂದು ಹೇಳಿದ್ದಾರೆ.
ಈ ವೇಳೆ ಪೊಲೀಸರು ಇಸ್ಲಾಂನನ್ನು ಕುಟುಂಬಸ್ಥರ ಮುಂದೆಯೇ ನಿರ್ದಯವಾಗಿ ಥಳಿಸಿದ್ದಾರೆ. ಬಳಿಕ ಯಾರಿಗೂ ತಿಳಿಸದೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವೇಳೆ ಕುಟುಂಬಸ್ಥರು ಹಣದ ವ್ಯವಸ್ಥೆ ಮಾಡಿಕೊಂಡು ಇಸ್ಲಾಂನನ್ನು ಬಿಡುಗಡೆ ಮಾಡಲು ಆಸ್ಪತ್ರೆಗೆ ಕೇಳಿಕೊಂಡು ಬಂದಾಗ ಇಸ್ಲಾಂನ ಶವವನ್ನು ಪೊಲೀಸರು ಹಸ್ತಾಂತರಿಸಿದ್ದಾರೆ.
ಆಕ್ರೋಶಕ್ಕೆ ಹೊತ್ತಿ ಉರಿದ ಠಾಣೆ: ಇಸ್ಲಾಂನ ಸಾವಿನಿಂದ ಕೆರಳಿದ ಅವನ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಪೊಲೀಸರ ಚಿತ್ರಹಿಂಸೆಗೆ ಆತ ಸಾವನ್ನಪ್ಪಿದ್ದಾನೆ ಎಂದು ಪೊಲೀಸ್ ಠಾಣೆಗೆ ಘೇರಾವ್ ಹಾಕಿದ್ದಾರೆ. ಠಾಣೆಯ ಮುಂದೆ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ, ಸ್ಥಳೀಯರು ಪೊಲೀಸ್ ಠಾಣೆಗೇ ಬೆಂಕಿ ಹಚ್ಚಿದ್ದಾರೆ.
ಈ ಬಗ್ಗೆ ಮಾತನಾಡಿದ ಪೊಲೀಸ್ ಅಧಿಕಾರಿಗಳು, ಪ್ರತಿಭಟನೆಯಲ್ಲಿ ಕೆಲವು ಕಿಡಿಗೇಡಿಗಳು ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ್ದಾರೆ. ಈ ಕುರಿತಾಗಿ ಮೂವರನ್ನು ಬಂಧಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ. ಇನ್ನು ಪೊಲೀಸರು ಲಂಚ ಕೇಳಿದ್ದು, ಲಾಕಪ್ ಡೆತ್ ಆರೋಪ ಕೇಳಿ ಬಂದ ಬಗ್ಗೆಯೂ ಪ್ರತಿಕ್ರಿಯಿಸಿ, ಪೊಲೀಸರ ಮೇಲೂ ತನಿಖೆ ನಡೆಸಲಾಗುವುದು. ತಪ್ಪು ಕಂಡು ಬಂದಲ್ಲಿ ಅವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಓದಿ: ಓಬಳಾಪುರಂ ಮೈನಿಂಗ್ ಕೇಸ್: ಒಎಂಸಿ ಅಧ್ಯಕ್ಷ ಶ್ರೀನಿವಾಸ್ ರೆಡ್ಡಿಗೆ ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್