ಗುವಾಹಟಿ: ಅತಿಯಾದ ಮಳೆ ಮತ್ತು ಮಂಜಿನಿಂದಾಗಿ ರಸ್ತೆ ಸರಿಯಾಗಿ ಕಾಣಿಸದೇ ಎರಡು ವಾಹನಗಳು ಡಿಕ್ಕಿಯಾಗಿ ಆಳ ಕಮರಿಗೆ ಬಿದ್ದು, 10 ಮಂದಿ ಸಾವನ್ನಪ್ಪಿದ ಘಟನೆ ಅಸ್ಸೋಂ- ನಾಗಾಲ್ಯಾಂಡ್ ಗಡಿ ಮರಿಯಾನಿ ಪ್ರದೇಶದಲ್ಲಿ ಬುಧವಾರ ಬೆಳಗ್ಗೆ ಸಂಭವಿಸಿದೆ.
ಜನರನ್ನು ಹೊತ್ತು ಸಾಗುತ್ತಿದ್ದ ವಾಹನ ಕೊಹಿಮಾದಿಂದ ಮರಿಯಾನಿಗೆ ತೆರಳುತ್ತಿತ್ತು. ಅತಿಯಾದ ಮಂಜಿನಿಂದಾಗಿ ರಸ್ತೆ ಮಸುಕಾಗಿ ಕಾಣಿಸುತ್ತಿತ್ತು. ಈ ವೇಳೆ ಎದುರಿಗೆ ಬಂದ ಟ್ರಕ್ಗೆ ವಾಹನ ಡಿಕ್ಕಿಯಾಗಿದೆ. ದುರ್ಘಟನೆಯಲ್ಲಿ ಎರಡೂ ವಾಹನಗಳು ರಸ್ತೆ ಬದಿಯ ಆಳದ ಕಮರಿಗೆ ಬಿದ್ದಿವೆ. ಸ್ಥಳದಲ್ಲೇ 10 ಮಂದಿ ಸಾವನ್ನಪ್ಪಿದ್ದಾರೆ. ಟ್ರಕ್ ಚಾಲಕ ಮತ್ತು ಕ್ಲೀನರ್ ಪರಿಸ್ಥಿತಿಯೂ ಚಿಂತಾಜನವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಾಗಾಲ್ಯಾಂಡ್ ಭಾಗದಲ್ಲಿ ಭಾರಿ ಮಳೆಯಾಗುತ್ತಿದೆ. ಇದರಿಂದ ವಾಹನ ಸಂಚಾರಕ್ಕೆ ಮಂಜು ಅಡ್ಡಿಯಾಗಿದೆ. ಕಡಿಮೆ ಗೋಚರತೆಯಿಂದಾಗಿ ಎರಡೂ ವಾಹನಗಳು ಡಿಕ್ಕಿ ಹೊಡೆದುಕೊಂಡು 200 ಮೀಟರ್ ಆಳದ ಕಮರಿಗೆ ಬಿದ್ದಿವೆ. ವಿಷಯ ತಿಳಿದ ಬಳಿಕ ಪೊಲೀಸ್ ಮತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿವೆ. ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಘಟನೆಯ ಬಗ್ಗೆ ಹೆಚ್ಚಿನ ವಿವರಗಳು ಸಿಗಬೇಕಿದೆ.
ಪಂಜಾಬ್ನಲ್ಲಿ ಕಾಳುವೆಗೆ ಬಿದ್ದ ಬಸ್: ಪಂಜಾಬ್ನಲ್ಲಿ ಪ್ರಯಾಣಿಕರಿದ್ದ ಬಸ್ ಕಾಲುವೆಗೆ ಬಿದ್ದು, ಅವಘಡದಲ್ಲಿ 8 ಮಂದಿ ಸಾವನ್ನಪ್ಪಿದ್ದಾರೆ. ಅಪಘಾತಕ್ಕೀಡಾದ ಬಸ್ ಮುಕ್ತಸರ್ ಸಾಹಿಬ್ ನಿಂದ ಕೊಟ್ಕಪುರಕ್ಕೆ ಹೊರಟಿತ್ತು. ಭಾರಿ ಮಳೆ ಮತ್ತು ಅತಿ ವೇಗ ಸಂಚಾರದಿಂದಾಗಿ ನಿಯಂತ್ರಣ ಕಳೆದುಕೊಂಡು ಘಟನೆ ಜರುಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್ ಸೇತುವೆಯ ತಡೆಗೋಡೆಗೆ ಡಿಕ್ಕಿಯಾಗಿದೆ. ಕಬ್ಬಿಣದ ತಡೆಗೋಡೆ ಇದ್ದುದರಿಂದ ಬಸ್ನ ಅರ್ಧ ಭಾಗ ಕಾಲುವೆಗೆ ಉರುಳಿದೆ. ಉಳಿದರ್ಧ ಭಾಗ ಸೇತುವೆಯ ಮೇಲೆಯೇ ನೇತಾಡುತ್ತಿತ್ತು. ಸ್ಥಳೀಯರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ಕೈಗೊಂಡರು. ಗಾಯಾಳು ಪ್ರಯಾಣಿಕರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದರು.
ಮುಖ್ಯಮಂತ್ರಿ ಭಗವಂತ್ ಮಾನ್ ಟ್ವೀಟ್ ಮಾಡಿ ಮೃತರಿಗೆ ಸಂತಾಪ ವ್ಯಕ್ತಪಡಿಸಿ, ರಕ್ಷಣಾ ಕಾರ್ಯಾಚರಣೆಗೆ ಅಗತ್ಯ ವ್ಯವಸ್ಥೆ ಕಲ್ಪಿಸಿರುವುದಾಗಿ ತಿಳಿಸಿದ್ದಾರೆ. ಸಂಪುಟ ಸಚಿವ ಗುರ್ಮೀತ್ ಸಿಂಗ್ ಖುಡಿಯಾನ್ ಮತ್ತು ಶಾಸಕ ಕಾಕಾ ಬ್ರಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹಿಂದಿನ ಘಟನೆ: 1992ರಲ್ಲಿ ಪಂಜಾಬ್ನ ಸರ್ಕಾರಿ ಬಸ್ವೊಂದು ಕಾಲುವೆಗೆ ಬಿದ್ದಿತ್ತು. ಘಟನೆಯಲ್ಲಿ ಮಕ್ಕಳು ಸೇರಿದಂತೆ ಸುಮಾರು 80 ಪ್ರಯಾಣಿಕರು ಸಾವನ್ನಪ್ಪಿದ್ದರು. ಈ ರಸ್ತೆಯಲ್ಲಿ ಇನ್ನೂ ಹೊಸ ಸೇತುವೆ ನಿರ್ಮಾಣವಾಗಿಲ್ಲ ಎಂಬ ಆರೋಪವಿದೆ.
ಇದನ್ನೂ ಓದಿ: ಬಳ್ಳಾರಿ: ಬಸ್ ಪಲ್ಟಿಯಾಗಿ ಶಾಲಾ ಮಕ್ಕಳು ಸೇರಿ 40ಕ್ಕೂ ಹೆಚ್ಚು ಜನರಿಗೆ ಗಾಯ