ಶ್ರೀಕಾಕುಳಂ: ಆಂಧ್ರಪ್ರದೇಶದ ರಾಜಂ ಪಟ್ಟಣದಲ್ಲಿರುವ ನಿವಾಸದಲ್ಲಿದ್ದ ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖಂಡ ಮತ್ತು ಮಾಜಿ ಸಚಿವ ಕಿಮಿಡಿ ಕಲಾ ವೆಂಕಟರಾವ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಜನವರಿ 2 ರಂದು ರಾಮತೀರ್ಥಂನಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ವೆಂಕಟರಾವ್ರನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ. ವೆಂಕಟರಾವ್ ಅವರನ್ನು ವಿಜಯನಗರಂ ಜಿಲ್ಲೆಯ ನೆಲ್ಲಿಮಾರ್ಲಾ ಪೊಲೀಸರು ಚಿಪುರುಪಲ್ಲಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.
ರಾಮನ ವಿಗ್ರಹವನ್ನು ಅಪವಿತ್ರಗೊಳಿಸಲಾಗಿರುವ ಹಿನ್ನೆಲೆ ಜನವರಿ 2ರಂದು ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಮತ್ತು ವೈಎಸ್‌ಆರ್‌ಸಿಪಿ ಸಂಸದ ವಿಜಯಸಾಯಿ ರೆಡ್ಡಿ ರಾಮತೀರ್ಥಂನಲ್ಲಿರುವ ಶ್ರೀರಾಮನ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ವೇಳೆ, ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿತ್ತು.
ವೈಎಸ್‌ಆರ್‌ಸಿಪಿ ಕಾರ್ಯಕರ್ತರ ದೂರುಗಳ ಆಧಾರದ ಮೇಲೆ ಪೊಲೀಸರು ಹಲವಾರು ಜನರ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ್ದರು. ಆ ಪ್ರಕರಣಗಳಿಗೆ ಸಂಬಂಧಿಸಿದಂತೆ ವೆಂಕಟರಾವ್ ಅವರನ್ನು ಬಂಧಿಸಲಾಗಿದೆ.
ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರು ವೆಂಕಟರಾವ್ ಬಂಧನವನ್ನು ಖಂಡಿಸಿದ್ದಾರೆ. ವೆಂಕಟರಾವ್ ವಿರುದ್ಧದ ಸುಳ್ಳು ಪ್ರಕರಣಗಳನ್ನು ಎತ್ತಿ ಯಾವುದೇ ಷರತ್ತುಗಳಿಲ್ಲದೇ ತಕ್ಷಣ ಬಿಡುಗಡೆ ಮಾಡಬೇಕೆಂದು ಅವರು ಒತ್ತಾಯಿಸಿದ್ದಾರೆ.
ಟಿಡಿಪಿ ಆಂಧ್ರಪ್ರದೇಶದ ಅಧ್ಯಕ್ಷ ಅಚನ್ನೈದು ಕೂಡ ಈ ಬಂಧನವನ್ನು ಖಂಡಿಸಿದ್ದು, 65 ವರ್ಷದ ನಾಯಕನನ್ನು ರಾತ್ರಿ ಅವರ ಮನೆಯಲ್ಲಿ ಏಕೆ ಬಂಧಿಸಲಾಗಿದೆ?, ವೆಂಕಟರಾವ್ ಅವರನ್ನು ಯಾವ ಅಪರಾಧಕ್ಕಾಗಿ ಬಂಧಿಸಲಾಗಿದೆ?, ರಾಮತೀರ್ಥಂ ದೇವಸ್ಥಾನಕ್ಕೆ ಭೇಟಿ ನೀಡುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.