ಭದ್ರಾದ್ರಿ ಕೊತ್ತಗುಡೆಂ (ತೆಲಂಗಾಣ): ಸರ್ಕಾರಿ ಸಾಮ್ಯದ ಕಲ್ಲಿದ್ದಲು ಗಣಿ ಕಚೇರಿ ಮುಂದೆ ಎತ್ತೊಂದು ಮೂತ್ರ ವಿಸರ್ಜನೆ ಮಾಡಿದ್ದಕ್ಕೆ ರೈತನಿಗೆ ನೂರು ರೂಪಾಯಿ ದಂಡ ವಿಧಿಸಿದ ವಿಲಕ್ಷಣ ಘಟನೆ ತೆಲಂಗಾಣದ ಭದ್ರಾದ್ರಿ ಕೊತ್ತಗುಡೆಂ ಜಿಲ್ಲೆಯಲ್ಲಿ ನಡೆದಿದೆ.
ಸಿಂಗರೇಣಿ ಕಲ್ಲಿದ್ದಲು ಗಣಿ ಕಂಪನಿ (Singareni Collieries Company Limited - SCCL)ಯು ಭೂ ಸ್ವಾಧೀನದ ಪರಿಹಾರ ನೀಡದೇ ಇರುವುದರಿಂದ ರೈತ ಸುಂದರ್ಲಾಲ್ ಲೋಧ್ ಎಂಬುವರರು ತಮ್ಮ ಎತ್ತು ಬಂಡಿಯ ಸಮೇತವಾಗಿ ಇಲ್ಲಿನ ಯೆಲ್ಲಾಂಡಿನಲ್ಲಿರುವ ಪ್ರಧಾನ ವ್ಯವಸ್ಥಾಪಕರು (ಜಿಎಂ) ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ, ಕಚೇರಿ ಮುಂದಿನ ರಸ್ತೆಯ ಮೇಲೆ ಎತ್ತೊಂದು ಮೂತ್ರ ಮಾಡಿದೆ.
ಈ ಬಗ್ಗೆ ರೈತ ಮತ್ತು ಆತನ ಕುಟುಂಬದ ವಿರುದ್ಧ ಸಾರ್ವಜನಿಕರಿಗೆ ಸಮಸ್ಯೆ ಉಂಟು ಮಾಡಿದ ಹಾಗೂ ಜಿಎಂ ಕಚೇರಿ ಮುಂದೆ ಎತ್ತು ಮೂತ್ರ ಮಾಡಿದ ಸಂಬಂಧ ಎಸ್ಸಿಸಿಎಲ್ ಕಚೇರಿಯ ಅಧಿಕಾರಿಗಳು ಯೆಲ್ಲಾಂಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಲ್ಲದೇ ರೈತನನ್ನು ತಡೆಯಲು ಯತ್ನಿಸಿದ ಭದ್ರತಾ ಸಿಬ್ಬಂದಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಸ್ಥಳದಿಂದ ತೆರಳಲು ನಿರಾಕರಿಸಿದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ನ್ಯಾಯಾಲಯಕ್ಕೂ ರೈತ ಹಾಜರು: ಈ ದೂರಿನ ಮೇರೆಗೆ ಐಪಿಸಿ ಸೆಕ್ಷನ್ 270 (ಜೀವಕ್ಕೆ ಅಪಾಯಕಾರಿ ರೋಗ ಹರಡುವ ಮಾರಣಾಂತಿಕ ಕೃತ್ಯ) ಅಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ರೈತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಅಲ್ಲಿ ನ್ಯಾಯಾಲಯವು ರೈತನಿಗೆ ನೂರು ರೂಪಾಯಿ ದಂಡ ವಿಧಿಸಿದೆ.
ರೈತನ ವಿರುದ್ಧ ಪ್ರಕರಣ ದಾಖಲಿಸಿ, ದಂಡ ಹಾಕಿರುವ ಬಗ್ಗೆ ಸಾಕಷ್ಟು ಟೀಕೆ ಕೂಡ ವ್ಯಕ್ತವಾಗಿದೆ. ಇದೇ ವೇಳೆ, ಎತ್ತು ಮೂತ್ರ ವಿಸರ್ಜನೆ ಮಾಡಿಲ್ಲ ಎಂದು ರೈತ ಸುಂದರ್ಲಾಲ್ ಲೋಧ್ ಹೇಳಿದ್ದಾರೆ. ಅಲ್ಲದೇ, ಅಧಿಕಾರಿಗಳ ನಡೆ ಬಗ್ಗೆ ರೈತನ ಮಗಳ ಮಾನಸಿ ಆಕ್ರೋಶ ವ್ಯಕ್ತಪಡಿಸಿದ್ದು, ಜನರು ಸಾರ್ವಜನಿಕವಾಗಿಯೇ ಮೂತ್ರ ವಿಸರ್ಜನೆ ಮಾಡುತ್ತಾರೆ. ಅವರಿಗೆ ಯಾರೂ ಕೂಡಾ ದಂಡ ಹಾಕಲ್ಲ. ಆದರೆ, ಎತ್ತು ಮೂತ್ರ ಮಾಡಿದರೆ ದಂಡ ಹಾಕುತ್ತಾರೆ ಎಂದು ಕಿಡಿಕಾರಿದ್ದಾರೆ.
ಮತ್ತೊಂದೆಡೆ, 2005ರಲ್ಲಿ ತಮ್ಮ ಜಮೀನನ್ನು ಕಂಪನಿ ಸ್ವಾಧೀನಪಡಿಸಿಕೊಂಡಿದ್ದರೂ ಪರಿಹಾರ ನೀಡಿಲ್ಲ ಎಂದು ರೈತ ಆರೋಪಿಸಿದ್ದಾರೆ. ಆದರೆ, ಕಾನೂನಿನ ಪ್ರಕಾರ ಸರ್ಕಾರದ ಮೂಲಕ ಸಂಬಂಧಪಟ್ಟ ಹಕ್ಕುದಾರರಿಗೆ ಪರಿಹಾರ ಪಾವತಿಸಲಾಗಿದೆ. ಅಲ್ಲದೇ, ಈ ಕುರಿತ ರೈತನ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ. ಆದರೂ, ಈ ರೈತ ಸಮಸ್ಯೆ ಸೃಷ್ಟಿಸುತ್ತಿದ್ದಾನೆ ಎಂದು ಎಸ್ಸಿಸಿಎಲ್ ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ: ವೈಎಸ್‌ಆರ್ ತೆಲಂಗಾಣ ಪಕ್ಷದ ಅಧ್ಯಕ್ಷೆ ಶರ್ಮಿಳಾಗೆ ಪ್ರಧಾನಿ ಮೋದಿ ಕರೆ