ಹೈದರಾಬಾದ್: ದೇಶ 74ನೇ ಗಣರಾಜ್ಯೋತ್ಸವದ ಸಂಭ್ರಮದಲ್ಲಿದ್ದರೆ, ಇತ್ತ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ರಾವ್ ಅವರು ಧ್ವಜಾರೋಹಣದಿಂದ ದೂರವೇ ಉಳಿದಿದ್ದಾರೆ. ಹೈದರಾಬಾದ್ನ ರಾಜಭವನದಲ್ಲಿ ನಡೆದ ಧ್ವಜಾರೋಹಣಕ್ಕೆ ಅವರು ಅನುಪಸ್ಥಿತರಾಗಿದ್ದರು. ಸಂಜೆ ರಾಜ್ಯಪಾಲರು ನೀಡುವ ಭೋಜನ ಕೂಟಕ್ಕೂ ಕೆಸಿಆರ್ ಭಾಗವಹಿಸುವುದಿಲ್ಲ. ರಾಜ್ಯಪಾಲರ ಜೊತೆಗಿನ ಭಿನ್ನಾಭಿಪ್ರಾಯಗಳೇ ಇದಕ್ಕೆ ಕಾರಣ ಎಂದು ತಿಳಿದು ಬಂದಿದೆ.
ಇಂದು ಬೆಳಗ್ಗೆ ತೆಲಂಗಾಣ ರಾಜ್ಯಪಾಲೆ ಡಾ.ತಮಿಳಿಸೈ ಸುಂದರ್ರಾಜನ್ ಅವರು ಪ್ರಗತಿ ಭವನದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಇದಕ್ಕೂ ಮುನ್ನ ಸಿಕಂದರಾಬಾದ್ ಪರೇಡ್ ಮೈದಾನದಲ್ಲಿರುವ ಅಮರ ಸೈನಿಕರ ಸ್ಮಾರಕದಲ್ಲಿ ಜ್ಯೋತಿ ಬೆಳಗಿಸಿ ನಮನ ಸಲ್ಲಿಸಿದರು.
ಮುಖ್ಯಮಂತ್ರಿಯಿಂದ ಶುಭಾಶಯ: ರಾಜ್ಯಗಳ ಒಕ್ಕೂಟವಾಗಿ ವಿಜೃಂಭಿಸುತ್ತಿರುವ ಭಾರತದಲ್ಲಿ ನ್ಯಾಯ, ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವದ ಆಧಾರ ಸ್ತಂಭಗಳ ಮೇಲೆ ಆಡಳಿತ ನಡೆಸಿದಾಗ ಮಾತ್ರ ದೇಶ ಮುಂದೆ ಸಾಗಲಿದೆ, ಪ್ರಗತಿಯ ಹಾದಿ ಹಿಡಿಯಲಿದೆ. ಪ್ರತಿಯೊಬ್ಬ ಪ್ರಜೆಯೂ ಪವಿತ್ರ ಸಂವಿಧಾನವನ್ನು ಕೂಲಂಕಷವಾಗಿ ಅರಿತುಕೊಂಡು, ಅದರ ಆಶೋತ್ತರಗಳನ್ನು ಸಾಧಿಸಲು ಶ್ರಮಿಸಬೇಕು ಎಂದು ಸಿಎಂ ಕೆಸಿಆರ್ ಕರೆ ನೀಡಿದ್ದಾರೆ. ಅಲ್ಲದೇ, ಜನತೆಗೆ ಗಣರಾಜ್ಯೋತ್ಸವದ ಶುಭ ಹಾರೈಸಿದ್ದಾರೆ.
ಸಿಎಂ- ರಾಜ್ಯಪಾಲೆ ಜಟಾಪಟಿ: ತೆಲಂಗಾಣದಲ್ಲಿ ಮುಖ್ಯಮಂತ್ರಿ ಮತ್ತು ರಾಜ್ಯಪಾಲರ ಮಧ್ಯೆ ಜಟಾಪಟಿ ನಡೆಯುತ್ತಿದೆ. ಸಿಕಂದರಾಬಾದ್ ಪರೇಡ್ ಮೈದಾನದಲ್ಲಿ ಸಮಾರಂಭ ನಡೆಸುವ ಬದಲು ರಾಜಭವನದಲ್ಲಿಯೇ ಸಮಾರಂಭ ನಡೆಸುವಂತೆ ಸರ್ಕಾರ ರಾಜ್ಯಪಾಲರಿಗೆ ಪತ್ರ ಬರೆದಿತ್ತು. ಕೋವಿಡ್ ಹಿನ್ನೆಲೆಯಲ್ಲಿ ರಾಜಭವನದಲ್ಲಿಯೇ ಗಣರಾಜ್ಯೋತ್ಸವ ಆಚರಿಸಲಾಗುವುದು ಎಂದು ರಾಜ್ಯ ಸರ್ಕಾರ ಹೇಳಿತ್ತು. ಈ ಬಗ್ಗೆ ರಾಜ್ಯಪಾಲರಾದ ತಮಿಳಿಸೈ ಸುಂದರರಾಜನ್ ಬೇಸರ ವ್ಯಕ್ತಪಡಿಸಿದ್ದರು. ಕೊರೊನಾ ಹೆಸರಿನಲ್ಲಿ ಯಾವುದೇ ಆಚರಣೆಗಳು ನಡೆಯದಿರುವುದು ಬೇಸರದ ಸಂಗತಿ ಎಂದು ಅಸಮಾಧಾನಗೊಂಡಿದ್ದರು.
ಅದ್ಧೂರಿ ಗಣರಾಜ್ಯೋತ್ಸವಕ್ಕೆ ಸೂಚನೆ: ಅದ್ಧೂರಿ ಗಣರಾಜ್ಯೋತ್ಸವ ಹಾಗೂ ಪರೇಡ್ ಅನ್ನು ಸರ್ಕಾರ ಆಯೋಜಿಸಿಲ್ಲ ಎಂದು ಹೈದರಾಬಾದ್ ಮೂಲದ ಉದ್ಯಮಿ ಕೆ.ಶ್ರೀನಿವಾಸ್ ಎಂಬುವವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ತುರ್ತು ವಿಚಾರಣೆ ನಡೆಸಿದ ಹೈಕೋರ್ಟ್, ಕೇಂದ್ರದ ಮಾರ್ಗಸೂಚಿಯಂತೆ ಗಣರಾಜ್ಯೋತ್ಸವವನ್ನು ಅದ್ಧೂರಿಯಾಗಿ ನಡೆಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು.
ಗೂಗಲ್ ಡೂಡಲ್ ವಿಶೇಷ ಶುಭಾಶಯ: ಸರ್ಚ್ ಎಂಜಿನ್ ಗೂಗಲ್ ಎಲ್ಲಾ ಭಾರತೀಯರಿಗೆ ಗಣರಾಜ್ಯೋತ್ಸವದ ಶುಭಾಶಯಗಳನ್ನು ವಿಶೇಷವಾಗಿ ತಿಳಿಸಿದೆ. ಗುಜರಾತ್ನ ಅಹಮದಾಬಾದ್ ಮೂಲದ ಕಲಾವಿದ ಪಾರ್ಥ್ ಕೊಥೇಕರ್ ಅವರು ಭಾರತದ ಗಣರಾಜ್ಯೋತ್ಸವದ ಅಂಗವಾಗಿ ರಚಿಸಿದ ಕಾಗದದ ಕಲಾಕೃತಿಯ ವಿಡಿಯೋವನ್ನು ಹಂಚಿಕೊಂಡಿದೆ. 1950 ಜನವರಿ 26 ರಂದು ಭಾರತವು ಸಂವಿಧಾನದ ಅಂಗೀಕಾರದೊಂದಿಗೆ ತನ್ನನ್ನು ತಾನು ಸಾರ್ವಭೌಮ, ಪ್ರಜಾಪ್ರಭುತ್ವ ಮತ್ತು ಗಣರಾಜ್ಯವೆಂದು ಘೋಷಿಸಿಕೊಂಡಿತು. ಈ ಶುಭ ದಿನವನ್ನು ಗೂಗಲ್ ಡೂಡಲ್ ಕೂಡ ನೆನಪಿಸಿಕೊಂಡು ದೇಶದ ಜನತೆಗೆ ಶುಭಕೋರಿದೆ.
ಇದನ್ನೂ ಓದಿ: 'ಭಾರತದ ಪ್ರಗತಿಗೆ ಸಂಕಲ್ಪ ಮಾಡೋಣ': ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದ ಬಳಿಕ ಸಿಎಂ ಕರೆ