ಹೈದರಾಬಾದ್: ಕಳೆದ ನಾಲ್ಕು ತಿಂಗಳಿನಲ್ಲಿ ಎರಡನೇ ಬಾರಿಗೆ ತೆಲಂಗಾಣ ಸಿಎಂ ಕೆಸಿಆರ್ ಮೋದಿ ಭೇಟಿಯಾಗುವುದರಿಂದ ತಪ್ಪಿಸಿಕೊಂಡಿದ್ದಾರೆ. ಇಂದು ಪ್ರಧಾನಿ ಮೋದಿ ಹೈದರಾಬಾದ್‌ಗೆ ಆಗಮಿಸಿದ್ದರೇ, ಇತ್ತ ಸಿಎಂ ಕೆಸಿಆರ್ ಬೆಂಗಳೂರಿಗೆ ಬಂದಿದ್ದು, ಅಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಮತ್ತು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿಯಾಗಿದ್ದಾರೆ.
ಫೆಬ್ರವರಿಯಲ್ಲಿ ಸಂತ ರಾಮಾನುಜಾಚಾರ್ಯರ ಸಮಾನತೆಯ ಪ್ರತಿಮೆಯನ್ನು ಅನಾವರಣಗೊಳಿಸಲು ಪ್ರಧಾನಿ ಹೈದರಾಬಾದ್‌ಗೆ ಬಂದಿದ್ದರು. ಆಗ ಸಿಎಂ ಚಂದ್ರಶೇಖರ್ ರಾವ್ ಅವರು 'ಅಸ್ವಸ್ಥರಾಗಿದ್ದರಿಂದ' ಪ್ರಧಾನಿಯನ್ನು ಸ್ವಾಗತಿಸಲು ಸಾಧ್ಯವಾಗಲಿಲ್ಲ ಎಂದು ಮೂಲಗಳು ಹೇಳಿದ್ದವು.
ಇಂದು ಪ್ರಧಾನಿ ಮೋದಿ ಹೈದರಾಬಾದ್‌ಗೆ ಬಂದಿದ್ದು, ಇತ್ತ ಕೆಸಿಆರ್ ಬೆಂಗಳೂರಿನಲ್ಲಿ ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ಹೆಚ್‌ಡಿ ದೇವೇಗೌಡ ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ರಾಷ್ಟ್ರ ರಾಜಕಾರಣದ ಬಗ್ಗೆ ಚರ್ಚಿಸಿದ್ದಾರೆ. ಕೆಸಿಆರ್ ದೇವೇಗೌಡರೊಂದಿಗೆ ರಾಷ್ಟ್ರ ರಾಜಕೀಯ ಮತ್ತು ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಚುನಾವಣೆಯಲ್ಲಿ ಸ್ಥಳೀಯ ಪಕ್ಷಗಳ ಪಾತ್ರದ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗ್ತಿದೆ.
ಇದನ್ನೂ ಓದಿ: 'ಪರಿವಾರವಾದಿ' ಪಕ್ಷಗಳು ಪ್ರಜಾಪ್ರಭುತ್ವ-ಯುವ ಜನತೆಯ ದೊಡ್ಡ ಶತ್ರು: ಮೋದಿ ವಾಗ್ದಾಳಿ
ಇತ್ತೀಚೆಗೆ ಕೆಸಿಆರ್ ದೆಹಲಿ ಮತ್ತು ಪಂಜಾಬ್ ಮುಖ್ಯಮಂತ್ರಿಗಳಾದ ಅರವಿಂದ್ ಕೇಜ್ರಿವಾಲ್ ಹಾಗೂ ಭಗವಂತ್ ಮಾನ್ ಅವರನ್ನು ಭೇಟಿ ಮಾಡಿದ್ದರು. ಚಂಡೀಗಢದಲ್ಲಿ ಅವರು ವಿವಾದಿತ ಕೃಷಿ ಕಾನೂನುಗಳ ವಿರುದ್ಧದ ಹೋರಾಟದಲ್ಲಿ ಪ್ರಾಣ ಕಳೆದುಕೊಂಡ ರೈತರ ಕುಟುಂಬಗಳಿಗೆ ಆರ್ಥಿಕ ನೆರವು ನೀಡಿದ್ದರು.
ಈ ನಡುವೆ ಇಂದು ಮಧ್ಯಾಹ್ನ ಹೈದರಾಬಾದ್‌ಗೆ ಬಂದಿಳಿದ ಮೋದಿ ಅವರನ್ನು ಬೇಗಂಪೇಟೆ ವಿಮಾನ ನಿಲ್ದಾಣದಲ್ಲಿ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಭವ್ಯವಾಗಿ ಸ್ವಾಗತಿಸಿದರು. ಬೇಗಂಪೇಟೆ ವಿಮಾನ ನಿಲ್ದಾಣದಲ್ಲಿ ರಾಜ್ಯ ಬಿಜೆಪಿ ಮುಖಂಡರು ಏರ್ಪಡಿಸಿದ್ದ ಸ್ವಾಗತ ಸಭೆಯಲ್ಲಿ ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಮೋದಿ ಮಾತನಾಡಿದರು.