ಹೈದರಾಬಾದ್: ಬಜೆಟ್ ಅಧಿವೇಶನ ಕುರಿತು ರಾಜ್ಯಪಾಲರು ಮತ್ತು ತೆಲಂಗಾಣ ಸರ್ಕಾರದ ನಡುವಿನ ಗುದ್ದಾಟವನ್ನು ಹೈಕೋರ್ಟ್ ತಿಳಿಗೊಳಿಸಿದ್ದು, ನಿಗದಿಯಂತೆ ಫೆಬ್ರವರಿ 3 ರಿಂದ ಅಧಿವೇಶನ ಆರಂಭವಾಗಲಿದೆ. ಮೊದಲು ರಾಜ್ಯಪಾಲರು ಭಾಷಣ ಮಾಡಲಿದ್ದು, ಬಳಿಕ ಸರ್ಕಾರ ಆಯವ್ಯಯ ಮಂಡಸಲಿದೆ.
ಅಧಿವೇಶನಕ್ಕೆ ನಾಲ್ಕೇ ದಿನ ಬಾಕಿ ಇದ್ದರೂ, ಬಜೆಟ್ ಮಂಡನೆಗೆ ತೆಲಂಗಾಣ ರಾಜ್ಯಪಾಲೆ ತಮಿಳಿಸೈ ಸುಂದರ್ರಾಜನ್ ಅನುಮೋದನೆ ನೀಡಿರಲಿಲ್ಲ. ಇದರ ವಿರುದ್ಧ ಸರ್ಕಾರ ಹೈಕೋರ್ಟ್ ಮೆಟ್ಟಿಲೇರಿತ್ತು. ವಿಚಾರಣೆ ನಡೆಸಿದ ಕೋರ್ಟ್ ಬಜೆಟ್ ಮಂಡನೆಗೆ ಅನುಮೋದಿಸಲು ರಾಜ್ಯಪಾಲರನ್ನು ವಕೀಲರ ಮೂಲಕ ಕೋರಿದೆ. ಇದಕ್ಕೆ ರಾಜ್ಯಪಾಲರು ಒಪ್ಪಿಗೆ ನೀಡಿದ್ದು, ಬಿಕ್ಕಟ್ಟು ಶಮನವಾಗಿದೆ.
ಹೈಕೋರ್ಟ್ ವಿಚಾರಣೆ ವೇಳೆ ಸರ್ಕಾರ ಮತ್ತು ರಾಜಭವನ ವಕೀಲರ ಮಧ್ಯೆ ಸಂಧಾನ ಏರ್ಪಡಿಸಲಾಗಿದೆ. ರಾಜ್ಯಪಾಲರು ಬಜೆಟ್ ಅಧಿವೇಶನ ಭಾಷಣವನ್ನು ಮಾಡಲಿದ್ದಾರೆ ಎಂದು ರಾಜಭವನ ವಕೀಲರು ತಿಳಿಸಿದರು. ಇದಕ್ಕೆ ಸರ್ಕಾರದ ಪರ ವಕೀಲರು ಕೂಡ ಸಮ್ಮತಿಸಿದ್ದು, ಉಂಟಾಗಿದ್ದ ಬಿಕ್ಕಟ್ಟು ತಿಳಿಯಾಗಿದೆ.
ಅಧಿವೇಶನದ ಕಲಾಪಗಳನ್ನು ಸಾಂವಿಧಾನಿಕ ರೀತಿಯಲ್ಲಿ ನಡೆಸಲು ನಿರ್ಧರಿಸಲಾಗಿದೆ. ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣಕ್ಕೆ ಸರ್ಕಾರ ಒಪ್ಪಿಗೆ ನೀಡಿದೆ. ರಾಜ್ಯಪಾಲರ ಭಾಷಣದೊಂದಿಗೆ ಕಲಾಪ ಆರಂಭವಾಗಲಿದೆ. ವಿಧಾನಸಭೆಯಲ್ಲಿ ಬಜೆಟ್ ಮಂಡಿಸಲು ರಾಜ್ಯಪಾಲರು ಅವಕಾಶ ನೀಡಲಿದ್ದಾರೆ ಎಂದು ಎರಡೂ ಕಡೆಯ ವಕೀಲರು ತಿಳಿಸಿದ ಬಳಿಕ ಹೈಕೋರ್ಟ್ ವಿಚಾರಣೆಯನ್ನು ಮುಕ್ತಾಯಗೊಳಿಸಿತು.
2023-24ನೇ ಸಾಲಿನ ಬಜೆಟ್ ಮಂಡನೆಗೆ ರಾಜ್ಯ ಸರ್ಕಾರ ಸಿದ್ಧತೆ ನಡೆಸಿದ್ದರೆ, ಇತ್ತ ರಾಜ್ಯಪಾಲರು ಮಾತ್ರ ಅನುಮೋದನೆ ನೀಡಿರಲಿಲ್ಲ. ಇದು ಸರ್ಕಾರಕ್ಕೆ ತಲೆನೋವಾಗಿತ್ತು. ನಿಯಮದಂತೆ ರಾಜ್ಯಪಾಲರ ಒಪ್ಪಿಗೆಯ ನಂತರವೇ ಸರ್ಕಾರ ಬಜೆಟ್ ಅನ್ನು ವಿಧಾನಸಭೆ ಮತ್ತು ಪರಿಷತ್ತಿನಲ್ಲಿ ಮಂಡಿಸಬೇಕು. ಮೂರು ದಿನಗಳ ಹಿಂದೆಯೇ ರಾಜ್ಯಪಾಲರ ಕಚೇರಿಗೆ ಈ ಬಾರಿಯ ಬಜೆಟ್ನ ಕರಡು ಪ್ರತಿಯನ್ನು ಕಳುಹಿಸಿತ್ತು. ಇದುವರೆಗೂ ರಾಜ್ಯಪಾಲರು ಅನುಮೋದಿಸಿರಲಿಲ್ಲ. ಇದನ್ನು ಪ್ರಶ್ನಿಸಿ ಸರ್ಕಾರ ಇಂದು ಬೆಳಗ್ಗೆ ಹೈಕೋರ್ಟ್ ಮೆಟ್ಟಿಲೇರಿತ್ತು.
ಬಜೆಟ್ ವೇಳಾಪಟ್ಟಿ ಬದಲು ಸಾಧ್ಯತೆ: ಬಜೆಟ್ ಅಧಿವೇಶನ ಕುರಿತಾಗಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ರಾವ್ ಅವರು ಸಚಿವರು ಮತ್ತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಸಭೆಗಳ ನಡಾವಳಿ, ರಾಜ್ಯಪಾಲರ ಭಾಷಣ, ಬಜೆಟ್ ಮಂಡನೆ ದಿನಾಂಕ ಹಾಗೂ ಸಂಬಂಧಿತ ವಿಷಯಗಳ ಕುರಿತು ಸಿಎಂ ಚರ್ಚೆ ನಡೆಯಿತು. ಬಜೆಟ್ ಅಧಿವೇಶನದ ಆರಂಭದಲ್ಲಿ ರಾಜ್ಯಪಾಲರ ಭಾಷಣ ದಿನ, ಸಮಯವನ್ನು ಬದಲಾವಣೆ ಮಾಡುವ ಸಾಧ್ಯತೆ ಇದೆ. ಫೆ.3 ನೇ ತಾರೀಖು 12:10 ಕ್ಕೆ ಉಭಯ ಸದನಗಳನ್ನು ಸಮಾವೇಶ ಮಾಡಲಾಗುವುದು ಎಂದು ತಿಳಿದು ಬಂದಿದೆ.
ರೈತಪರ ಬಜೆಟ್ಗಾಗಿ ಕೇಂದ್ರಕ್ಕೆ ಆಗ್ರಹ: ತೆಲಂಗಾಣಕ್ಕೆ ನೀಡಿರುವ ಎಲ್ಲ ಆಶ್ವಾಸನೆಗಳನ್ನು ಈಡೇರಿಸುವುದರ ಜೊತೆಗೆ ಫೆಬ್ರವರಿ 1 ರಂದು ಕಾರ್ಪೊರೇಟ್ ಸ್ನೇಹಿ ಅಲ್ಲದ, ಬಡವರ ಮತ್ತು ರೈತರ ಪರವಾದ ಬಜೆಟ್ ಮಂಡಿಸಬೇಕೆಂದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ತೆಲಂಗಾಣದ ಆಡಳಿತಾರೂಢ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಒತ್ತಾಯಿಸಿದೆ.
ತೆಲಂಗಾಣ ಸರ್ಕಾರದ ಕ್ರಮಗಳ ಮಾದರಿಯಲ್ಲಿಯೇ ಬಿಜೆಪಿ ಸರ್ಕಾರವು ಪಿಎಂ ಕಿಸಾನ್ ಕಾರ್ಯಕ್ರಮಕ್ಕೆ ಸಾಕಷ್ಟು ಹಣವನ್ನು ವಿನಿಯೋಗಿಸಬೇಕು ಮತ್ತು ಪ್ರತಿ ಎಕರೆಗೆ ರೈತರಿಗೆ ಪ್ರತಿ ಬೆಳೆಗೆ ರೂ.5000 ಆರ್ಥಿಕ ನೆರವು ನೀಡಬೇಕು. ರೈತ ಸಮುದಾಯಕ್ಕೂ ಉಚಿತ ವಿದ್ಯುತ್ ನೀಡಬೇಕು ಎಂದು ಬಿಆರ್‌ಎಸ್ ಕೋರಿದೆ.
ಓದಿ: ಬಜೆಟ್ಗೆ ಒಪ್ಪಿಗೆ ನೀಡದ ರಾಜ್ಯಪಾಲರು: ಹೈಕೋರ್ಟ್ ಮೆಟ್ಟಿಲೇರಿದ ತೆಲಂಗಾಣ ಸರ್ಕಾರ