ಹೈದರಾಬಾದ್: ಹೈದರಾಬಾದ್ನಲ್ಲಿರುವ ಹುಸೇನ್ ಸಾಗರ್ ಕೆರೆಯನ್ನು ವಿನಾಯಕ ಸಾಗರ್ ಎಂದು ಕರೆದಿರುವ ತೆಲಂಗಾಣ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್ ವಿವಾದದ ಅಲೆ ಎಬ್ಬಿಸಿದ್ದಾರೆ. ಗಣೇಶ ಚತುರ್ಥಿಯ ಸಮಯದಲ್ಲಿ ಗಣೇಶ ವಿಗ್ರಹಗಳ ನಿಮಜ್ಜನೆಗೆ ಸೂಕ್ತ ವ್ಯವಸ್ಥೆ ಮಾಡಿಲ್ಲ ಎಂದು ತೆಲಂಗಾಣದ ಟಿಆರ್ಎಸ್ ಸರ್ಕಾರದ ವಿರುದ್ಧ ಹರಿಹಾಯ್ದ ಅವರು ವಿನಾಯಕ ಸಾಗರ್ ಎಂದು ಉಲ್ಲೇಖಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹುಸೇನ್ ಸಾಗರ್ ಅನ್ನು ಉದ್ದೇಶಿಸಿ ಗಣೇಶ ವಿಗ್ರಹಗಳ ನಿಮಜ್ಜನೆಯು ವಿನಾಯಕ ಸಾಗರ್ನಲ್ಲಿ ನಡೆಯಲಿದೆ ಎಂದಿದ್ದಾರೆ. ಪ್ರತಿವರ್ಷ ಹೀಗೇ ಆಗುತ್ತಿದೆ. ಭಾಗ್ಯನಗರ ಗಣೇಶ ಉತ್ಸವ ಸಮಿತಿಯು ಪ್ರತಿಭಟನೆಗಿಳಿದ ನಂತರವೇ ಸರ್ಕಾರ ವ್ಯವಸ್ಥೆ ಮಾಡಲು ಆರಂಭಿಸಿದೆ. ಹಿಂದೂಗಳು ಸಂಕಷ್ಟದಲ್ಲಿರುವುದನ್ನು ನೋಡಿ ದಾರುಸ್ಸಲಾಮ್ನ ಎಐಎಂಐಎಂ ಕಚೇರಿಯಲ್ಲಿ ಸಂಭ್ರಮಾಚರಣೆ ಮಾಡಲಾಗುತ್ತಿದೆ. ಇದೇ ಟಿಆರ್ಎಸ್ನ ನಿಜವಾದ ಮುಖ ಎಂದು ಸಂಜಯ ಬಂಡಿ ವಾಗ್ದಾಳಿ ನಡೆಸಿದ್ದಾರೆ.
ಎರಡು ದಿನಗಳಲ್ಲಿ ದೊಡ್ಡ ಪ್ರಮಾಣದ ನಿಮಜ್ಜನ ನಡೆಯಲಿದ್ದು, ಕನಿಷ್ಠ ವ್ಯವಸ್ಥೆಯನ್ನೂ ಮಾಡಿಲ್ಲ. ಬೆಳಗ್ಗೆ ಕೆಲವು ಕ್ರೇನ್‌ಗಳನ್ನು ಮಾತ್ರ ಅಳವಡಿಸಲಾಗಿತ್ತು, ಅದು ಇನ್ನೂ ಕೆಲಸ ಮಾಡುತ್ತಿಲ್ಲ. ಕಳೆದ ಬಾರಿ ಸುಮಾರು 60 ಕ್ರೇನ್‌ಗಳನ್ನು ಅಳವಡಿಸಲಾಗಿತ್ತು. ಹಿಂದೂಗಳು ಈ ಸ್ಥಿತಿಯ ಬಗ್ಗೆ ಯೋಚಿಸಬೇಕಾಗುತ್ತದೆ ಎಂದು ಸಂಜಯ್ ಆಕ್ರೋಶ ವ್ಯಕ್ತಪಡಿಸಿದರು.
ಪೌರಾಡಳಿತ ಸಚಿವರು ನಾಸ್ತಿಕರು. ಅವರ ತಂದೆ ದೇವರನ್ನು ನಂಬುತ್ತಾರೆ, ಆದರೆ ಅವರು ನಂಬುವುದಿಲ್ಲ. ಭಾಗ್ಯನಗರ ಗಣೇಶ ಉತ್ಸವ ಸಮಿತಿಯ ಸಭೆಯ ನಂತರ ಅನಗತ್ಯ ನಿಯಮಗಳು ಮತ್ತು ನಿಬಂಧನೆಗಳನ್ನು ಹಾಕಲಾಯಿತು. ಕೇವಲ ಗಣೇಶ ಮೂರ್ತಿ ಇಡಲು ನಮಗೆ ಧ್ವನಿ ಅನುಮತಿ, ಎತ್ತರದ ಅನುಮತಿ, ಮತ್ತು ಕಂದಾಯ ಅನುಮತಿ ಪಡೆಯುವಂತೆ ಕಡ್ಡಾಯ ಮಾಡಲಾಗುತ್ತಿದೆ. ಹಿಂದೂಗಳು ತೆರಿಗೆ ಪಾವತಿಸುತ್ತಿಲ್ಲವೇ? ಅವರು ತೆಲಂಗಾಣ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಭಕ್ತರ ಅನುಕೂಲಕ್ಕೆ ತಕ್ಕಂತೆ ಗಣೇಶ ಮೂರ್ತಿ ನಿಮಜ್ಜನಕ್ಕೆ ಸರ್ಕಾರ ಸಹಕರಿಸದಿದ್ದರೆ ನಾವು ಸಹಿಸುವುದಿಲ್ಲ. ನಿಮಜ್ಜನಕ್ಕಾಗಿ ಪ್ರಗತಿ ಭವನದವರೆಗೆ ಹೋರಾಟ ನಡೆಸುತ್ತೇವೆ. ಒಂದು ನಿರ್ದಿಷ್ಟ ಸಮುದಾಯದ ಮತಗಳನ್ನು ಸೆಳೆಯಲು ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿರುವ ಕೆಸಿಆರ್‌ಗೆ ಹಿಂದೂ ಸಮುದಾಯ ಹೆದರುವುದಿಲ್ಲ. ಇದು ಹೀಗೆಯೇ ಮುಂದುವರಿದರೆ ಹುಸೇನ್ ಸಾಗರದಲ್ಲಿ ಭಕ್ತರು ನಿಮಜ್ಜನಕ್ಕೆ ಮುಂದಾಗುತ್ತಾರೆ. ಅದೇನಾಗುತ್ತದೆ ಎಂಬುದನ್ನು ನೋಡುತ್ತೇವೆ ಎಂದು ಸಂಜಯ್ ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಹೈದರಾಬಾದ್ 'ಭಾಗ್ಯನಗರ' ಎಂದು ಘೋಷಿಸಿ..; ಬಂಡಿ ಸಂಜಯ್ ಒತ್ತಾಯ