ಹೈದರಾಬಾದ್ (ತೆಲಂಗಾಣ): ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಝಣ - ಝಣ ಕಾಂಚಾಣದ ಸದ್ದು ಜೋರಾಗಿದೆ. ಮತದಾನಕ್ಕೆ ಕೆಲವು ದಿನಗಳು ಬಾಕಿ ಉಳಿದಿದ್ದು, ಹಣ ಸಾಗಾಟ ಹೆಚ್ಚಾಗುತ್ತಿದೆ. ರಾಜಧಾನಿ ಹೈದರಾಬಾದ್ನಲ್ಲಿ ಶನಿವಾರ ಆರು ಕಾರುಗಳಲ್ಲಿ ಕಂತೆ-ಕಂತೆ ನೋಟುಗಳು ಪತ್ತೆಯಾಗಿವೆ. ಈ ನೋಟುಗಳ ಮೌಲ್ಯ ಬರೋಬ್ಬರಿ 7.40 ಕೋಟಿ ರೂಪಾಯಿ ಎಂದು ಪೊಲೀಸರು ತಿಳಿಸಿದ್ದಾರೆ.
ಸೈಬರಾಬಾದ್ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಔಟರ್ ರಿಂಗ್ ರೋಡ್ನ ಎಪಿಪಿಎ ಸರ್ಕಲ್ ಬಳಿ ವಾಹನ ತಪಾಸಣೆ ವೇಳೆ ಕಾರುಗಳಲ್ಲಿ ಕೋಟಿಗಟ್ಟಲೆ ನಗದು ಪತ್ತೆಯಾಗಿದೆ. ಬ್ಯಾಗ್ಗಳಲ್ಲಿ ತುಂಬಿಸಿಕೊಂಡು ರಾಜ್ಯದ ಬೇರೆಡೆಗೆ ಈ ಹಣ ಸಾಗಿಸಲಾಗುತ್ತಿತ್ತು. ಈ ಹಣವನ್ನು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ. ಆದರೆ, ಇಷ್ಟೊಂದು ನಗದು ಯಾರಿಗೆ ಸೇರಿದ್ದು?, ಯಾರನ್ನಾದರೂ ಬಂಧಿಸಲಾಗಿದೆಯೇ ಎಂಬುದನ್ನು ಪೊಲೀಸರು ಬಹಿರಂಗಪಡಿಸಿಲ್ಲ. ಈ ಕುರಿತು ಹಣವನ್ನು ಸಾಗಿಸುತ್ತಿದ್ದವರನ್ನು ವಿಚಾರಣೆ ನಡೆಸಲಾಗಿದೆ. ತನಿಖೆಯ ನಂತರ ಸಂಪೂರ್ಣ ಮಾಹಿತಿ ನೀಡುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಅಭ್ಯರ್ಥಿಗಳ ಪರ ಪ್ರಚಾರದ ವೇಳೆ ಕುಸಿದು ಬಿದ್ದ ಬಿಆರ್ಎಸ್ ನಾಯಕಿ ಕವಿತಾ - ವಿಡಿಯೋ
603 ಕೋಟಿ ಮೌಲ್ಯದ ಸ್ವತ್ತು ಜಪ್ತಿ: ತೆಲಂಗಾಣದ 119 ಸದಸ್ಯ ಬಲದ ವಿಧಾನಸಭೆಗೆ ನವೆಂಬರ್ 30ರಂದು ಚುನಾವಣೆ ನಡೆಯಲಿದೆ. ಚುನಾವಣಾ ವೇಳಾಪಟ್ಟಿ ಬಿಡುಗಡೆಯಾದ ನಂತರ ಭಾರೀ ಪ್ರಮಾಣದ ನಗದು ಸಾಗಾಟ ನಡೆಯುತ್ತಿದೆ. ಜೊತೆಗೆ ಮದ್ಯ, ಡ್ರಗ್ಸ್, ಚಿನ್ನ ಸೇರಿದಂತೆ ಇತರರ ವಸ್ತುಗಳನ್ನು ಸಾಗಾಟ ಕೂಡ ಜೋರಾಗಿದೆ. ಇದುವರೆಗೆ 214 ಕೋಟಿ ರೂಪಾಯಿ ನಗದು ಸೇರಿ 214 ಕೋಟಿ ರೂಪಾಯಿ ನಗದು ಒಟ್ಟಾರೆ 603 ಕೋಟಿ ರೂಪಾಯಿ ಮೌಲ್ಯದ ಸ್ವತ್ತು ಜಪ್ತಿ ಮಾಡಲಾಗಿದೆ.
ರಾಜ್ಯ ಮತ್ತು ಕೇಂದ್ರದ ಜಾರಿ ಸಂಸ್ಥೆಗಳ ಜಂಟಿ ಕಾರ್ಯಾಚರಣೆ ನಡೆಸಿ, ಇದುವರೆಗೆ 179 ಕೋಟಿ ರೂಪಾಯಿ ಮೌಲ್ಯದ ಚಿನ್ನ ಮತ್ತು ಇತರ ಅಮೂಲ್ಯ ಲೋಹಗಳನ್ನು ವಶಪಡಿಸಿಕೊಂಡಿವೆ. 96 ಕೋಟಿ ಮೌಲ್ಯದ ಮದ್ಯ ಮತ್ತು 34 ಕೋಟಿ ಮೌಲ್ಯದ ಡ್ರಗ್ಸ್, ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಕ್ಕಿ, ಸೀರೆ, ಮೊಬೈಲ್ ಸೇರಿದಂತೆ ಒಟ್ಟು 78 ಕೋಟಿ ಮೌಲ್ಯದ ಉಚಿತ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
2018ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ನಗದು, ಮದ್ಯ ಮತ್ತು ಇತರ ವಸ್ತುಗಳ ಸೇರಿ ಒಟ್ಟು 103.89 ಕೋಟಿ ರೂ. ಮೌಲ್ಯದ ಸ್ವತ್ತು ಜಪ್ತಿ ಮಾಡಲಾಗಿತ್ತು. ಆದರೆ, ಈ ಚುನಾವಣೆಯಲ್ಲಿ ಅಕ್ರಮ ಸಾಗಾಟ ಮೌಲ್ಯವು ಈಗಾಗಲೇ 600 ಕೋಟಿ ತಲುಪಿದೆ. ಮತದಾನಕ್ಕೆ ಇನ್ನೂ 12 ದಿನಗಳು ಬಾಕಿ ಇದ್ದು, ಇದು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.