ಹಾಪುರ್(ಉತ್ತರಪ್ರದೇಶ): ಜಿಲ್ಲೆಯ ಧೌಲಾನಾ ತಾಲೂಕಿನ ಹಳ್ಳಿಯೊಂದರ ಪ್ರಾಥಮಿಕ ಶಾಲೆಯಲ್ಲಿ ನಾಚಿಕೆಗೇಡಿನ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಬ್ಬರು ಪ್ರಾಥಮಿಕ ಶಾಲಾ ಶಿಕ್ಷಕರ ಮೇಲೆ ಇಬ್ಬರು ವಿದ್ಯಾರ್ಥಿನಿಯರು ತಮ್ಮ ಸಮವಸ್ತ್ರವನ್ನು ಬಲವಂತವಾಗಿ ತೆಗೆದಿದ್ದಾರೆ ಎಂದು ಆರೋಪಿಸಿದ್ದಾರೆ. ಈ ವಿಷಯ ತಿಳಿದ ಶಿಕ್ಷಣಾಧಿಕಾರಿ ಇಬ್ಬರು ಶಿಕ್ಷಕರನ್ನು ಅಮಾನತು ಮಾಡಿ ತನಿಖೆಗೆ ಆದೇಶಿಸಿದ್ದಾರೆ.
ನನ್ನ 9 ವರ್ಷದ ಮಗಳು ಮತ್ತು ನಮ್ಮ ಸಹೋದರನ ಎಂಟು ವರ್ಷದ ಮಗಳು ಸಂಯುಕ್ತ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾರೆ. ಶಾಲೆಯಲ್ಲಿ ಇಬ್ಬರು ಶಿಕ್ಷಕರು ನಮ್ಮ ಇಬ್ಬರು ಮಕ್ಕಳು ತೊಟ್ಟ ಉಡುಪನ್ನು ತೆಗೆದು ಇತರ ವಿದ್ಯಾರ್ಥಿನಿಯರಿಗೆ ನೀಡುವಂತೆ ಹೇಳಿದ್ದಾರೆ. ಆದರೆ ಈ ವೇಳೆ ನಮ್ಮ ಮಕ್ಕಳು ಇದನ್ನು ನಿರಾಕರಿಸಿದರು ಎಂದು ಸಂತ್ರಸ್ತ ಬಾಲಕಿಯ ತಂದೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಓದಿ: 'ಟೀ ಶರ್ಟ್' ವಿಚಾರಕ್ಕೆ ಮೆಟ್ರೋದಲ್ಲಿ ಯುವಕ - ಯುವತಿ ಫೈಟ್... ವಿಡಿಯೋ
ನಮ್ಮ ಮಕ್ಕಳು ಬಟ್ಟೆ ತೆಗೆಯಲು ನಿರಾಕರಿಸಿದ್ದಾಗ ಶಿಕ್ಷಕರು ಥಳಿಸಿದ್ದಾರೆ. ಅಷ್ಟೇ ಅಲ್ಲ ನಿಮ್ಮಿಬ್ಬರನ್ನೂ ಶಾಲೆಯಿಂದ ಹೊರ ಹಾಕುವುದಾಗಿ ಬೆದರಿಸಿದ್ದಾರೆ. ಬಳಿಕ ಅವರೇ ಬಲವಂತವಾಗಿ ನಮ್ಮಿಬ್ಬರ ಮಕ್ಕಳ ಬಟ್ಟೆಯನ್ನು ತೆಗೆದು ಇತರ ವಿದ್ಯಾರ್ಥಿನಿಯರಿಗೆ ನೀಡಿದ್ದಾರೆ. ಇದಾದ ನಂತರ ತಮ್ಮ ಹುಡುಗಿಯರ ಉಡುಪುಗಳನ್ನು ಧರಿಸಿದ್ದ ಆ ಮಕ್ಕಳ ಫೋಟೋವನ್ನು ತೆಗೆಸಿಕೊಂಡಿದ್ದಾರೆ. ಫೋಟೋ ಕ್ಲಿಕ್ಕಿಸಿಕೊಂಡ ಬಳಿಕ ಮತ್ತೆ ನಮ್ಮ ಮಕ್ಕಳ ಬಟ್ಟೆಯನ್ನು ಹಿಂದಿರುಗಿಸಿದ್ದಾರೆ. ಬಳಿಕ ಈ ವಿಷಯವನ್ನು ಮನೆಯಲ್ಲಿ ಯಾರಿಗೂ ಹೇಳದಂತೆ ಬೆದರಿಸಿ ಕಳುಹಿಸಿದ್ದಾರೆ ಎಂದು ಸಂತ್ರಸ್ತೆಯ ತಂದೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇಬ್ಬರು ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂತ್ರಸ್ತೆ ತಂದೆ ಮನವಿ ಮಾಡಿದ್ದಾರೆ. ವಿಷಯ ಗಮನಕ್ಕೆ ಬಂದಿದೆ ಎನ್ನುತ್ತಾರೆ ಶಿಕ್ಷಣಾಧಿಕಾರಿ ಅರ್ಚನಾ ಗುಪ್ತಾ. ವಿಷಯ ತಿಳಿದ ಕೂಡಲೇ ಇಬ್ಬರೂ ಶಿಕ್ಷಕರನ್ನು ಅಮಾನತು ಮಾಡಲಾಗಿದೆ. ಇಡೀ ಪ್ರಕರಣದ ತನಿಖೆ ನಡೆಯುತ್ತಿದೆ. ತನಿಖೆಯ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಗುಪ್ತಾ ಅವರು ಭರವಸೆ ನೀಡಿದ್ದಾರೆ.