ಭಾರತ್‌ಪುರ (ರಾಜಸ್ಥಾನ): ಮೆಚ್ಚಿದ ವಿದ್ಯಾರ್ಥಿನಿಯನ್ನು ಮದುವೆಯಾಗಲು ಶಿಕ್ಷಕಿಯೊಬ್ಬರು ಲಿಂಗ ಬದಲಾಯಿಸಿಕೊಂಡ ವಿಚಿತ್ರ ಘಟನೆ ರಾಜಸ್ಥಾನದ ಭಾರತ್ಪುರದಲ್ಲಿ ನಡೆದಿದೆ. ದೈಹಿಕ ಶಿಕ್ಷಕಿಯಾಗಿದ್ದ ಮೀರಾ ಕುಂತಲ್ ಇದೀಗ ಆರವ್ ಆಗುವ ಮೂಲಕ ವಿದ್ಯಾರ್ಥಿನಿಯಾದ ಕಲ್ಪನಾರನ್ನು ಮದುವೆಯಾಗಿದ್ದಾರೆ.
ಕಬಡ್ಡಿ ತರಬೇತಿ ನೀಡುತ್ತಿದ್ದ ಮೀರಾ: ನವೆಂಬರ್ 4 ರಂದು ಕಲ್ಪನಾ ಮತ್ತು ಆರವ್ ಮನೆಯವರ ಒಪ್ಪಿಗೆಯೊಂದಿಗೆ ವಿವಾಹವಾಗಿದ್ದಾರೆ. ಮೀರಾ (ಆರವ್) ರಾಷ್ಟ್ರೀಯ ಮಟ್ಟದ ಚಾಂಪಿಯನ್ ಆಗಿದ್ದಾರೆ. ಮೀರಾ ಡೀಗಿನ್ ಸರ್ಕಾರಿ ಪ್ರೌಢಶಾಲೆ ನಾಗಲಾ ಮೋತಿಯಲ್ಲಿ ದೈಹಿಕ ಶಿಕ್ಷಕಿಯಾಗಿದ್ದರು. ಅಲ್ಲಿ ಶಾಲೆಯ ವಿದ್ಯಾರ್ಥಿನಿಯರಿಗೆ ಕಬಡ್ಡಿ ಹೇಳಿಕೊಡುತ್ತಿದ್ದರು. ಕಲ್ಪನಾ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ, ಮೀರಾ ಕುಂತಲ್ (ಆರವ್) ಮಾರ್ಗದರ್ಶನದಲ್ಲಿ ಮೊದಲ ಬಾರಿಗೆ ರಾಜ್ಯಮಟ್ಟಕ್ಕೆ ಆಯ್ಕೆಯಾದರು. ಕಲ್ಪನಾ 11 ಮತ್ತು 12 ನೇ ತರಗತಿಯಲ್ಲೂ ರಾಜ್ಯ ಮಟ್ಟದಲ್ಲಿ ಆಟವನ್ನು ಆಡಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡುತ್ತಿರುವ ಕಲ್ಪನಾ: ಪದವಿ ಓದುತ್ತಿರುವಾಗ ಕಲ್ಪನಾ 2021 ರಲ್ಲಿ ರಾಷ್ಟ್ರಮಟ್ಟದ ಕಬಡ್ಡಿ ಆಟವನ್ನು ಆಡಿ ತಮ್ಮ ಪ್ರತಿಭೆಯನ್ನು ತೋರಿದ್ದಾರೆ. 2023ರ ಜನವರಿಯಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಪ್ರೊ-ಕಬಡ್ಡಿಯಲ್ಲಿ ಭಾಗವಹಿಸಲು ಕಲ್ಪನಾ ದುಬೈಗೆ ತೆರಳಲಿದ್ದಾರೆ. ಇನ್ನು, ಮೀರಾ (ಆರವ್) ರಾಷ್ಟ್ರಮಟ್ಟದ ಕ್ರಿಕೆಟ್‌ನಲ್ಲಿ 3 ಬಾರಿ ಮತ್ತು ಹಾಕಿಯಲ್ಲಿ 4 ಬಾರಿ ಆಡಿದ್ದಾರೆ. ಮೀರಾ, ಆರವ್ ಆದ ನಂತರವೂ ವಿದ್ಯಾರ್ಥಿಗಳಿಗೆ ಕಬಡ್ಡಿ ಮತ್ತು ವಾಲಿಬಾಲ್ ತರಬೇತಿಯನ್ನು ನೀಡುತ್ತಿದ್ದಾರೆ.
ಪ್ರೀತಿ ಬೆಳೆದಿದ್ದು ಹೇಗೆ: ಹೀಗೆ ಕಬಡ್ಡಿ ತರಬೇತಿ ನೀಡುತ್ತಿರುವಾಗಲೇ ಮೀರಾ ಮತ್ತು ಕಲ್ಪನಾ ನಡುವೆ ಪ್ರೀತಿ ಶುರುವಾಗಿದೆ. 2018ರಲ್ಲಿ ಮೀರಾ (ಆರವ್) ಕಲ್ಪನಾಗೆ ಮದುವೆಯಾಗುವುದಾಗಿ ಹೇಳಿದ್ದಾರೆ. ಇದಕ್ಕೆ ಆಕೆ ಸಹ ಒಪ್ಪಿದ್ದಾಳೆ. ಆದ್ರೆ ಇದಕ್ಕೆ ಪೋಷಕರು ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಹಾಗಾಗಿ ಮೀರಾ ಲಿಂಗವನ್ನು ಬದಲಾಯಿಸಿಕೊಳ್ಳಲು ನಿರ್ಧರಿಸಿದ್ದಾರೆ. ಲಿಂಗ ಬದಲಾವಣೆಯ ಸಮಯದಲ್ಲಿ ಕಲ್ಪನಾ ಆರವ್ನನ್ನು ಸಂಪೂರ್ಣವಾಗಿ ನೋಡಿಕೊಂಡಿದ್ದಾರೆ.
ಆರವ್ ಹೇಳಿದ್ದೇನು?: ನಾನು ಯಾವಾಗಲೂ ಹುಡುಗರಂತೆ ಇರುತ್ತಿದ್ದೆ. ಹಾಗಾಗಿ ಈ ನಿರ್ಧಾರ ಮಾಡಿದೆ. 2019 ರಿಂದ ಶಸ್ತ್ರಚಿಕಿತ್ಸೆ ಮಾಡಿಕೊಳ್ಳುವುದು ಆರಂಭವಾಯಿತು. ಕೊನೆಯದಾಗಿ 2021 ರಲ್ಲಿ ಅಂತಿಮ ಶಸ್ತ್ರಚಿಕಿತ್ಸೆ ಮಾಡಲಾಯಿತು. ಅಂತಿಮವಾಗಿ ನಾನು ಲಿಂಗವನ್ನು ಬದಲಾಯಿಸಿಕೊಂಡು, ಕಲ್ಪನಾರನ್ನು ಮದುವೆಯಾಗಿದ್ದೇನೆ ಎಂದು ಆರವ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಲಿಂಗ ಬದಲಾಯಿಸಿಕೊಂಡು ಮೀರಾ ಕುಂತಲ್ ಈಗ ಆರವ್ ಆಗಿದ್ದಾರೆ. ಮೀರಾ ಹುಡುಗಿಯಾಗಿ ಜನಿಸಿದ್ದರೂ, ಅವರ ನಡೆ ಹುಡುಗರಂತೆ ಇತ್ತು ಎಂದು ಆರವ್ ತಂದೆ ವೀರಿ ಸಿಂಗ್ ಹೇಳಿದ್ದಾರೆ.
ವೈದ್ಯರ ಪ್ರಕಾರ, ಮೀರಾ ಡಿಸ್ಫೋರಿಯಾವನ್ನು ಹೊಂದಿದ್ದರು. ಹಾಗಾಗಿ ಮೀರಾ ಲಿಂಗ ಬದಲಾವಣೆ ಮಾಡಲು ನಿರ್ಧರಿಸಿದರು. ಇದಕ್ಕೆ ನಾವೆಲ್ಲರೂ ಸಂಪೂರ್ಣ ಬೆಂಬಲವನ್ನು ನೀಡಿದ್ದೇವೆ. ಮೀರಾ ನಾಲ್ಕು ಹೆಣ್ಣು ಮಕ್ಕಳಲ್ಲಿ ಕಿರಿಯವಳು ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.