ಮೈಹಾರ್(ಮಧ್ಯಪ್ರದೇಶ): ಮದುವೆಯಾಗುವುದು ಮೊದಲ ಆದ್ಯತೆ ಎಂದು ಚುನಾವಣಾ ಕರ್ತವ್ಯಕ್ಕೆ ಗೈರಾದ ಸರ್ಕಾರಿ ಶಿಕ್ಷಕನನ್ನು ಅಮಾನತುಗೊಳಿಸಿರುವ ಘಟನೆ ಮಧ್ಯಪ್ರದೇಶದ ಮೈಹಾರ್ ಜಿಲ್ಲೆಯಲ್ಲಿ ನಡೆದಿದೆ. ಮೈಹಾರ್ ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅಖಿಲೇಶ್ ಕುಮಾರ್ ಮಿಶ್ರಾ (35) ಅಮಾನತು ಶಿಕ್ಷೆಗೊಳಗಾದ ಶಿಕ್ಷಕ.
ಅಖಿಲೇಶ್ ಕಮಾರ್ ಮೈಹಾರ್ ಜಿಲ್ಲೆಯ ಅಮರ್ಪಟನ್ನ ಮಹದೂರ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಂಸ್ಕೃತ ಭಾಷೆ ಬೋಧಿಸುತ್ತಿದ್ದರು. ಕಳೆದ ಕೆಲವು ದಿನಗಳ ಹಿಂದೆ ಅಖಿಲೇಶ್‌ರನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಅಕ್ಟೋಬರ್ 16- 17ರಂದು ಚುನಾವಣಾ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲಾಗಿತ್ತು. ಆದರೆ ಗೈರಾಗಿದ್ದರು. ಅಕ್ಟೋಬರ್ 6ರಂದು ಅಖಿಲೇಶ್‌ಗೆ ಅಧಿಕಾರಿಗಳು ಶೋಕಾಸ್ ನೋಟಿಸ್ ನೀಡಿದ್ದರು. ಕರ್ತವ್ಯ ಲೋಪ ಎಸಗಿರುವ ಬಗ್ಗೆ ಸ್ಪಷ್ಟನೆ ನೀಡುವಂತೆ ಕೇಳಲಾಗಿತ್ತು. ಈ ನೊಟೀಸ್ಗೆ ಪತ್ರದ ಅಕ್ಟೋಬರ್ 30ಕ್ಕೆ ಅಖಿಲೇಶ್ ಪ್ರತಿಕ್ರಿಯೆ ನೀಡಿದ್ದರು.
ಅಖಿಲೇಶ್ ಪತ್ರದಲ್ಲಿ, "ನನ್ನ ಇಡೀ ಜೀವನವನ್ನು ನಾನು ಹೆಂಡತಿ ಇಲ್ಲದೆ ಕಳೆದಿದ್ದೇನೆ. ನನ್ನ ಎಲ್ಲಾ ರಾತ್ರಿಗಳು ವ್ಯರ್ಥವಾಗಿವೆ. ಮೊದಲು ನನಗೆ ಮದುವೆ ಮಾಡಿ, ನಂತರ ನಾನು ಚುನಾವಣಾ ಕರ್ತವ್ಯಕ್ಕೆ ಹಾಜರಾಗುತ್ತೇನೆ" ಎಂದು ಮನವಿ ಮಾಡಿದ್ದಾರೆ. ಅಲ್ಲದೆ ಮೂರುವರೆ ಲಕ್ಷ ರೂಪಾಯಿ ವರದಕ್ಷಿಣೆ ಜೊತೆಗೆ ಸಿಂಗ್ರೌಲಿ ಟವರ್ ಅಥವಾ ಸಮದ್ರಿಯಾ ಬಳಿ ಫ್ಲಾಟ್ ಖರೀದಿಸಲು ಸಾಲ ನೀಡುವಂತೆಯೂ ಒತ್ತಾಯಿಸಿದ್ದಾರೆ. ಪತ್ರದ ಕೊನೆಗೆ, ಏನು ಮಾಡುವುದು, ಏನು ಹೇಳಬೇಕೋ ನನಗೆ ಒಂದೂ ಗೊತ್ತಾಗುತ್ತಿಲ್ಲ. ನೀನು ಜ್ಞಾನದ ಸಾಗರ ಎಂದು ಬರೆದಿದ್ದಾರೆ. ಈ ಪತ್ರವನ್ನು ಕಂಡ ಅಧಿಕಾರಿಗಳು, ನವೆಂಬರ್ 2ರಂದು ಶಿಕ್ಷಕ ಅಖಿಲೇಶ್ನನ್ನು ಅಮಾನತುಗೊಳಿಸಿ ಆದೇಶಿಸಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಅನುರಾಗ್ ವರ್ಮಾ, "ಚುನಾವಣಾ ಕರ್ತವ್ಯಕ್ಕೆ ಹಾಜರಾಗದ ಶಿಕ್ಷಕನನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ. ವರದಕ್ಷಿಣೆಗೆ ಬೇಡಿಕೆ ಇಟ್ಟಿದ್ದಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ. ವರದಕ್ಷಿಣೆ ನೀಡುವುದು ಮತ್ತು ಪಡೆಯುವುದು ಸಾಮಾಜಿಕ ಪಿಡುಗು. ಇದನ್ನು ಸಹಿಸಲು ಸಾಧ್ಯವಿಲ್ಲ. ಈ ಸಂಬಂಧ ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ" ಎಂದು ಹೇಳಿದರು.
ಅಖಿಲೇಶ್ ಸಹೋದ್ಯೋಗಿಯೊಬ್ಬರು ಪ್ರತಿಕ್ರಿಯಿಸಿ, "ಅವರು ಕಳೆದ ಕೆಲವು ವರ್ಷಗಳಿಂದ ಮಾನಸಿಕ ಒತ್ತಡದಿಂದ ಬಳಲುತ್ತಿದ್ದರು. ಕೆಲ ವರ್ಷಗಳ ಹಿಂದೆಯೇ ಫೋನ್ ಬಳಕೆ ನಿಲ್ಲಿಸಿದ್ದರು. ಇಲ್ಲದಿದ್ದರೆ ಶೋಕಾಸ್ ನೋಟಿಸ್ಗೆ ಈ ರೀತಿ ವಿಚಿತ್ರವಾಗಿ ಪ್ರತಿಕ್ರಿಯೆ ನೀಡುತ್ತಿರಲಿಲ್ಲ" ಎಂದು ತಿಳಿಸಿದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕಿ ಬರ್ಬರ ಹತ್ಯೆ!