ಶಹದೋಲ್ (ಮಧ್ಯಪ್ರದೇಶ): ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ಭ್ರಮೆಯಲ್ಲಿ ಶಿಕ್ಷಕನೋರ್ವ ವಿದ್ಯಾರ್ಥಿನಿಯೊಬ್ಬರನ್ನು ಅರೆಬೆತ್ತಲೆ ನಿಲ್ಲಿಸಿ ಎಡವಟ್ಟು ಮಾಡಿದ್ದಾರೆ. ತಾನು ಮಾಡಿದ ಈ ತಪ್ಪಿನಿಂದಲೇ ಶಿಕ್ಷಕ ಅಮಾನತು ಶಿಕ್ಷೆಗೆ ಒಳಗಾಗಿದ್ದಾರೆ.
ಮಧ್ಯಪ್ರದೇಶದ ಶಹದೋಲ್ ಜಿಲ್ಲೆಯ ಬಾರಾ ತೋಲಾ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ. ಇದೇ ಶುಕ್ರವಾರ 5ನೇ ತರಗತಿಯ ಬುಡಕಟ್ಟು ವಿದ್ಯಾರ್ಥಿನಿಯು ಕೊಳಕು ಬಟ್ಟೆ ತೊಟ್ಟು ಬಂದಿದ್ದರು. ಆಗ ಶಿಕ್ಷಕ ಶ್ರವಣ್ ಕುಮಾರ್ ತ್ರಿಪಾಠಿ, ವಿದ್ಯಾರ್ಥಿನಿಗೆ ತನ್ನ ಕೊಳಕು ಸಮವಸ್ತ್ರವನ್ನು ತೆಗೆಯುವಂತೆ ಸೂಚಿಸಿದ್ದಾರೆ. ಇದರಿಂದ ಆ ವಿದ್ಯಾರ್ಥಿನಿಯ ಸಮವಸ್ತ್ರ ಕಳಚಿಕೊಟ್ಟು ಅರೆಬೆತ್ತಲೆಯಾಗಿ ನಿಲ್ಲುವಂತೆ ಆಗಿದೆ.
ಇದನ್ನೂ ಓದಿ: 12ರ ಬಾಲಕನೊಂದಿಗೆ ನಾಲ್ವರಿಂದ ಅಸ್ವಾಭಾವಿಕ ಲೈಂಗಿಕ ಕ್ರಿಯೆ: ಖಾಸಗಿ ಅಂಗಕ್ಕೆ ರಾಡ್ ಹಾಕಿ ಚಿತ್ರಹಿಂಸೆ
ಅಲ್ಲದೇ, ಆ ವಿದ್ಯಾರ್ಥಿನಿಯ ಸಮವಸ್ತ್ರವನ್ನು ಶಿಕ್ಷಕ ಶ್ರವಣ್ ಕುಮಾರ್ ತ್ರಿಪಾಠಿ ತಾವೇ ನೀರಿನಲ್ಲಿ ಶುಚಿ ಮಾಡಿದ್ದಾರೆ. ಹೀಗಾಗಿ ಸಮವಸ್ತ್ರ ಒಣಗುವವರೆಗೆ ವಿದ್ಯಾರ್ಥಿನಿ ಸುಮಾರು ಎರಡು ಗಂಟೆಗಳ ಕಾಲ ಅದೇ ಸ್ಥಿತಿಯಲ್ಲಿದ್ದರು. ವಿಚಿತ್ರವೆಂದರೆ ಆ ಶಿಕ್ಷಕ ತಾವು ಬಟ್ಟೆ ತೊಳೆಯುತ್ತಿರುವ ಹಾಗೂ ಆ ವಿದ್ಯಾರ್ಥಿನಿ ಅರೆಬೆತ್ತಲೆಯಾಗಿ ನಿಂತಿರುವ ಫೋಟೋಗಳನ್ನು ತೆಗೆಸಿದ್ದಾರೆ.
ಇಲಾಖೆಯ ಗ್ರೂಪ್ಗೆ ಫೋಟೋ ಶೇರ್: ಈ ಶಿಕ್ಷಕ ಮಾಡಿರುವ ಮತ್ತೊಂದು ಎಡವಟ್ಟು ಎಂದರೆ ತಾನು ಸ್ವಚ್ಛತಾ ಸ್ವಯಂಸೇವಕ ಎಂದು ಹೇಳಿಕೊಂಡು ಫೊಟೋಗಳು ಇಲಾಖೆಯ ವ್ಯಾಟ್ಸ್ಆ್ಯಪ್ ಗ್ರೂಪ್ಗೆ ಶೇರ್ ಮಾಡಿದ್ದಾರೆ. ವಿದ್ಯಾರ್ಥಿನಿಯು ಅರೆಬೆತ್ತಲೆ ನಿಂತಿರುವ ಹಾಗೂ ಬಟ್ಟೆ ತೊಳೆಯುತ್ತಿರುವ ಫೊಟೋಗಳನ್ನೂ ಶೇರ್ ಮಾಡಿದ್ದಾರೆ. ನಂತರ ಇದೇ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ಇವುಗಳನ್ನು ಕಂಡ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮಸ್ಥರು ಆಕ್ರೋಶಗೊಂಡ ಬೆನ್ನಲ್ಲೇ ಶಿಕ್ಷಕ ತ್ರಿಪಾಠಿ ಅವರನ್ನು ಶನಿವಾರ ಅಮಾನತುಗೊಳಿಸಲಾಗಿದೆ.
ಇದನ್ನೂ ಓದಿ: ಪತ್ನಿ ಕೆಂಪು ಮಗಳು ಕಪ್ಪು.. ಹೆಂಡ್ತಿ ಕೊಂದ ಪತಿ.. ತಾಯಿ ಕೊಲೆಯ ರಹಸ್ಯ ವಿವರಿಸಿದ ಮಗು!