ಅಮರಾವತಿ : ಆಂಧ್ರಪ್ರದೇಶದ ಆಡಳಿತಾರೂಢ ಪಕ್ಷ ವೈಎಸ್‌ಆರ್‌ಸಿಪಿ ಸಂಸದ ರಘುರಾಮ ಕೃಷ್ಣ ರಾಜು ಅವರಿಗೆ ಪೊಲೀಸ್ ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಲಾಗಿದೆ ಎಂಬ ಆರೋಪದ ವಿಚಾರದಲ್ಲಿ ಮಧ್ಯಪ್ರವೇಶಿಸುವಂತೆ ಕೋರಿ ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖ್ಯಸ್ಥ, ಆಂಧ್ರದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ಗೆ ಪತ್ರ ಬರೆದಿದ್ದಾರೆ.
ರಾಷ್ಟ್ರಪತಿಯೊಂದಿಗೆ ಆಂಧ್ರದ ಗವರ್ನರ್ ಬಿಸ್ವಾಭೂಷನ್ ಹರಿಚಂದನ್ ಮತ್ತು ಕೇಂದ್ರ ಗೃಹ ಕಾರ್ಯದರ್ಶಿ ಕೆ. ಅಜಯ್ ಬಲ್ಲಾರಿಗೆ ಕೂಡ ಪತ್ರ ಬರೆದಿರುವ ನಾಯ್ಡು, ರಾಜ್ಯ ಪೊಲೀಸ್ ಮತ್ತು ಆಂಧ್ರಪ್ರದೇಶ ಸರ್ಕಾರದಿಂದ ರಘುರಾಮ ಕೃಷ್ಣ ರಾಜು ಅವರ ಜೀವಕ್ಕೆ ಅಪಾಯವಿದೆ.
ಸಂಸದರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಲಾಗುತ್ತಿದೆ. ಆಡಳಿತ ಪಕ್ಷವು ಪ್ರಜಾಪ್ರಭುತ್ವವನ್ನು ಅಪಹಾಸ್ಯ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಈ ವಿಷಯದಲ್ಲಿ ಭಾರತದ ರಾಷ್ಟ್ರಪತಿ ಮತ್ತು ಕೇಂದ್ರ ಗೃಹ ಕಾರ್ಯದರ್ಶಿಯ ಹಸ್ತಕ್ಷೇಪದ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಸಿಐಡಿ ಪೊಲೀಸರು ನನ್ನನ್ನು ಥಳಿಸಿದ್ದಾರೆ : ವೈಎಸ್ಆರ್ಪಿಸಿ ಸಂಸದ ರಘುರಾಮ್ ಕೃಷ್ಣರಾಜ ಆರೋಪ
ಆಂಧ್ರ ಸರ್ಕಾರದ ಪ್ರತಿಷ್ಠೆಗೆ ಹಾನಿಯಾಗುವ ರೀತಿಯಲ್ಲಿ ವರ್ತಿಸಿದ್ದಾರೆ ಎಂಬ ಆರೋಪದ ಮೇಲೆ ಸಂಸದ ರಘುರಾಮ ಅವರ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಾಗಿತ್ತು. ಹೈದರಾಬಾದ್‌ನಲ್ಲಿ ರಾಜ್ಯದ ಅಪರಾಧ ತನಿಖಾ ದಳ (ಸಿಐಡಿ) ಅವರನ್ನು ಬಂಧಿಸಿತ್ತು.
ಸಿಐಡಿ ಪೊಲೀಸರ ಬಂಧನದಲ್ಲಿರುವ ರಘುರಾಮ ಅವರು ವಿಚಾರಣೆ ವೇಳೆ ನ್ಯಾಯಾಧೀಶರ ಮುಂದೆ ಸಿಐಡಿ ಪೊಲೀಸರು ತನ್ನನ್ನು ಥಳಿಸಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದ್ದರು.