ತಿರುಮಲ: ತ್ರೇತಾಯುಗದ ಹನುಮಂತನ ಜನ್ಮಸ್ಥಳ ಇರುವುದು ಕರ್ನಾಟಕದ ಕಿಷ್ಕಿಂಧೆಯ ಅಂಜನಾದ್ರಿ ಬೆಟ್ಟದಲ್ಲಿ ಅಲ್ಲ, ತಿರುಪತಿಯಲ್ಲಿರುವ ಅಂಜನಾದ್ರಿ ಬೆಟ್ಟದಲ್ಲಿ ಎಂದು ತಿರುಮಲ ತಿರುಪತಿ ದೇವಸ್ಥಾನಂ ಸಮಿತಿ ಅಧ್ಯಯನದ ಮೂಲಕ ಸ್ಪಷ್ಟಪಡಿಸಿದೆ.
ಈ ಬಗ್ಗೆ ಇಂದು ಅಧಿಕೃತವಾಗಿ ಈ ಹೇಳಿಕೆ ಬಿಡುಗಡೆ ಮಾಡಿದೆ. ಈ ಕುರಿತು ಉಂಟಾಗಿದ್ದ ವಿವಾದದ ಹಿನ್ನೆಲೆಯಲ್ಲಿ ಅಧ್ಯಯನಕ್ಕೆ ಟಿಟಿಡಿ ಸಮಿತಿ ರಚನೆ ಮಾಡಿತ್ತು. ಈ ಸಮಿತಿ ವೈಜ್ಞಾನಿಕ ಹಾಗೂ ಐತಿಹಾಸಿಕ ಸತ್ಯಗಳ ಆಧಾರದ ಮೇಲೆ ಅಧ್ಯಯನ ನಡೆಸಿ ವರದಿ ನೀಡಿದೆ. ವರದಿಯ ಅನ್ವಯ ಟಿಟಿಡಿ ಇಒ ಈ ಸಂಬಂಧ ತಿರುಮಲದ ಅಂಜನಾದ್ರಿ ಬೆಟ್ಟವೇ ಹನುಮ ಜನಿಸಿದ ಸ್ಥಳ ಎಂದು ಆದೇಶ ಹೊರಡಿಸಿದ್ದಾರೆ.
ಕಳೆದ ಡಿಸೆಂಬರ್ನಲ್ಲಿ ಈ ಬಗ್ಗೆ ಅಧ್ಯಯನಕ್ಕಾಗಿ ಟಿಟಿಡಿ ಸಮಿತಿಯೊಂದನ್ನು ರಚನೆ ಮಾಡಿತ್ತು. ಈ ಸಂಬಂಧ ಸಮಿತಿ ಸದಸ್ಯರು ಹಲವು ಬಾರಿ ಸಭೆ ಸೇರಿ ಹನುಮನ ಜನ್ಮಸ್ಥಳದ ಬಗ್ಗೆ ಐತಿಹ್ಯದ ದಾಖಲೆಗಳು, ಆಧಾರಗಳನ್ನು ಸಂಗ್ರಹಿಸಿ ಚರ್ಚೆ ನಡೆಸಿದ್ದರು. ಪೌರಾಣಿಕ ಕಥೆ, ಇತಿಹಾಸ, ದಾಖಲೆಗಳನ್ನು ಪರಿಶೀಲನೆ ನಡೆಸಿದ್ದರು. ಅಂತಿಮವಾಗಿ ಎಲ್ಲವನ್ನೂ ಪರಿಶೀಲಿಸಿ ತಿರುಪತಿಯ ಅಂಜನಾದ್ರಿ ಬೆಟ್ಟವೇ ಹನುಮನುದಿಸಿದ ಸ್ಥಳ ಎಂದು ನಿರ್ಧಾರಕ್ಕೆ ಬಂದಿದ್ದಾರೆ. ಅಷ್ಟೇ ಅಲ್ಲ, ಈ ಸಂಬಂಧ ಟಿಟಿಡಿ ಹನುಮ ಹುಟ್ಟಿದ ಸ್ಥಳದ ಬಗ್ಗೆ ಪುಸ್ತಕವೊಂದನ್ನು ಪ್ರಿಂಟ್ ಸಹ ಮಾಡಿದೆ.