ನವದೆಹಲಿ: ನಷ್ಟದಲ್ಲಿರುವ ಸರ್ಕಾರಿ ಒಡೆತನದ ಏರ್ ಇಂಡಿಯಾ ವಿಮಾನಗಳ ಹಣಕಾಸು ಬಿಡ್ ಮುಕ್ತಾಯಗೊಂಡಿದ್ದು, ಏರ್ ಇಂಡಿಯಾವನ್ನ ಮರುಪಡೆಯುವಲ್ಲಿ ಟಾಟಾ ಗ್ರೂಪ್ ಯಶಸ್ವಿಯಾಗಿದೆ ಎಂದು ಮೂಲಗಳು ತಿಳಿಸಿದ್ದು, ಶೀಘ್ರದಲ್ಲೇ ಕೇಂದ್ರ ವಿಮಾನಯಾನ ಸಚಿವಾಲಯ ಈ ಬಗ್ಗೆ ಅಧಿಕೃತ ಮಾಹಿತಿ ಹೊರಡಿಸಲಿದೆ.
1932ರ ಅಕ್ಟೋಬರ್ನಲ್ಲಿ 'ಟಾಟಾ ಏರ್‌ಲೈನ್ಸ್' ಹೆಸರಿನಲ್ಲಿ ಏರ್ ಇಂಡಿಯಾವನ್ನು ಟಾಟಾ ಗ್ರೂಪ್ ಸ್ಥಾಪಿಸಿತ್ತು. 1953 ರಲ್ಲಿ ಭಾರತ ಸರ್ಕಾರವು ಇದನ್ನು ರಾಷ್ಟ್ರೀಕರಣಗೊಳಿಸಿತ್ತು. ಆದರೆ, ಕಳೆದ ಕೆಲ ವರ್ಷಗಳಿಂದ ಏರ್ ಇಂಡಿಯಾ ವಿಮಾನಯಾನವು ಭಾರೀ ನಷ್ಟ ಅನುಭವಿಸುತ್ತಿತ್ತು. ಏರ್ ಇಂಡಿಯಾ ಸುಮಾರು 43,000 ಕೋಟಿ ರೂ. ಮೊತ್ತದ ಸಾಲ ಉಳಿಸಿಕೊಂಡಿದೆ.
ಹೀಗಾಗಿ ಸರ್ಕಾರವು ವಿಮಾನಗಳ ಷೇರು ಮಾರಾಟಕ್ಕೆ ಮುಂದಾಗಿತ್ತು. 2018ರಲ್ಲಿ ಶೇ.76ರಷ್ಟು ಷೇರು ಬಿಡ್ ಮಾಡಲು ಸಿದ್ಧವಿರುವುದಾಗಿ ಸರ್ಕಾರ ಘೋಷಣೆ ಮಾಡಿತ್ತು. ಆದರೆ ಇದಕ್ಕೆ ಯಾವ ಸಂಸ್ಥೆಯೂ ಮುಂದೆ ಬಂದಿರಲಿಲ್ಲ. ಆದ್ದರಿಂದ ಈ ಬಾರಿ ಶೇ.100ರಷ್ಟು ಹಣಕಾಸು ಬಿಡ್ಗೆ ಸರ್ಕಾರ ಘೋಷಣೆ ಮಾಡಿತ್ತು.
ಟಾಟಾ ಗ್ರೂಪ್ ಮತ್ತು ಸ್ಪೈಸ್ ಜೆಟ್ ಲಿಮಿಟೆಡ್ ಸರ್ಕಾರಕ್ಕೆ ಬಿಡ್ ಸಲ್ಲಿಸಿದ್ದವು. ಇದೀಗ ಟಾಟಾ ಗ್ರೂಪ್ ವಿಜೇತ ಬಿಡ್ಡರ್ ಆಗಿ ಹೊರಹೊಮ್ಮಿದ್ದು, ಏರ್ ಇಂಡಿಯಾವನ್ನ ಪುನಃ ತನ್ನ ಸ್ವಾಧೀನಕ್ಕೆ ಪಡೆದುಕೊಂಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.