ತಿರುವನಂತಪುರಂ: ಕೋವಿಡ್ ಹೊಡೆತದಿಂದ ಈಗಷ್ಟೆ ಚೇತರಿಸಿಕೊಳ್ಳುತ್ತಿರುವ ಕೇರಳ ಪ್ರವಾಸೋದ್ಯಮಕ್ಕೆ ಭಾನುವಾರ ಮಲಪ್ಪುರಂ ಜಿಲ್ಲೆಯ ತಾನೂರಿನಲ್ಲಿ ಸಂಭವಿಸಿದ ದೋಣಿ ಅಪಘಾತ ಈ ವಲಯಕ್ಕೆ ದೊಡ್ಡ ಹೊಡೆತ ನೀಡಿದಂತಾಗಿದೆ. ಮಲಪ್ಪುರಂ ಜಿಲ್ಲೆಯ ತಾನೂರು ಕರಾವಳಿಯ ಹಿನ್ನೀರು ಪ್ರದೇಶದಲ್ಲಿ ಭಾನುವಾರ ಸಂಜೆ ಪ್ರವಾಸಿಗರನ್ನು ಹೊತ್ತು ಸಾಗುತ್ತಿದ್ದ ಹೌಸ್ಬೋಟ್ ಮುಳುಗಿ ಸುಮಾರು 22 ಮಂದಿ ಸಾವನ್ನಪ್ಪಿದ್ದಾರೆ.
ದೇವರ ನಾಡು ಕೇರಳದಲ್ಲಿ ಪ್ರಕೃತಿ, ಹಸಿರು ಹೇಗೆ ಪ್ರವಾಸಿ ಆಕರ್ಷಣೆಯೋ ಅಂತೆಯೇ ಈ ಹಿನ್ನೀರಿನಲ್ಲಿ ಸಾಗುವ ಹೌಸ್ಬೋಟ್ಗಳೂ ಕೂಡ ಪ್ರವಾಸಿ ಆಕಷರ್ಣೆಯಾಗಿದೆ. ಮಕ್ಕಳಿಗೆ ಬೇಸಿಗೆ ರಜೆಯಿಂದಾಗಿ ಕೇರಳದ ಹಿನ್ನೀರಿನ ಪ್ರವಾಸೋದ್ಯಮ ಕ್ಷೇತ್ರ ಅಭಿವೃದ್ಧಿ ಹೊಂದುತ್ತಿರುವ ಈ ಸಮಯದಲ್ಲೇ ತಾನೂರ್ ದೋಣಿ ಅಪಘಾತ ಘಟಿಸಿದೆ. ಹಿನ್ನೀರಿನ ಪ್ರವಾಸೋದ್ಯಮ ಕೇಂದ್ರವೆಂದೇ ಕರೆಯಲ್ಪಡುವ ಅಲಪ್ಪುಳದಲ್ಲಿ ಹೌಸ್‌ಬೋಟ್‌ಗಳು ಹಾಗೂ ಶಿಕಾರಾ ಹೌಸ್ಬೋಟ್ಗಳನ್ನು ನಮ್ಮ ದೇಶದ ಮಾತ್ರವಲ್ಲದೆ ವಿದೇಶದ ಪ್ರವಾಸಿಗರು ಕೂಡ ಇಷ್ಟಪಡುತ್ತಾರೆ. ಪ್ರಕೃತಿ ಸೌಂದರ್ಯದ ಜೊತೆಗೆ ಹೌಸ್ಬೋಟ್ಗಳಿಗೂ ಮನಸೋತು ಹೆಚ್ಚಿನ ಪ್ರವಾಸಿಗರು ಬರುತ್ತಾರೆ. ಕಾಶ್ಮೀರದ ಹೌಸ್ಬೋಟ್ ನಂತರ ಅಲಪ್ಪುಳದಲ್ಲಿ ಹೌಸ್ಬೋಟ್ ಸವಾರಿ ಉತ್ತರ ಭಾರತದ ಪ್ರವಾಸಿಗರಲ್ಲಿ ಹೆಚ್ಚು ಜನಪ್ರಿಯವಾಗಿದೆ.
ಪ್ರವಾಸೋದ್ಯಮ ವಲಯದಲ್ಲಿ ಸಣ್ಣಪುಟ್ಟ ಅನಾಹುತಗಳು ಆಗಾಗ ಸಂಭವಿಸುತ್ತಿದ್ದರೂ ಕೇರಳದಲ್ಲಿ ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಸುರಕ್ಷತಾ ತಪಾಸಣೆ ಸರಿಯಾಗಿ ನಡೆಯದೇ ಇರುವುದು ವಾಸ್ತವ. ಕೇರಳದ ಪ್ರವಾಸೋದ್ಯಮವನ್ನು ಇತರ ರಾಜ್ಯಗಳಿಗೆ ಹಾಗೂ ವಿದೇಶಕ್ಕೂ ಪರಿಚಯಿಸಲು, ವಿದೇಶಿ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸಲು ಪ್ರಯತ್ನಿಸುತ್ತಿರುವ ರಾಜ್ಯ ಪ್ರವಾಸೋದ್ಯಮ ಇಲಾಖೆ, ತನ್ನ ಪ್ರವಾಸಿಗರ ಸುರಕ್ಷತೆಯ ಬಗ್ಗೆ ಹೆಚ್ಚು ಪರಿಗಣಿಸುತ್ತಿಲ್ಲ, ಕಾಳಜಿ ವಹಿಸುತ್ತಿಲ್ಲ ಎನ್ನುವುದಕ್ಕೆ ಈ ಅಪಘಾತ ಸಾಕ್ಷಿಯಾದಂತಿದೆ. ಕೇರಳದಲ್ಲಿ ಸರ್ಕಾರದ ಜೊತೆಗೆ ಖಾಸಗಿ ವಲಯದಲ್ಲೂ ಜಲ ಪ್ರವಾಸೋದ್ಯಮ ಸಕ್ರಿಯವಾಗಿದೆ.
ದೋಣಿ ದುರಂತಗಳ ಇತಿಹಾಸ: ಕೇರಳದಲ್ಲಿ ದೋಣಿ ದುರಂತ ಮೊದಲೇನಲ್ಲ. ದುರಂತಗಳ ದೊಡ್ಡ ಇತಿಹಾಸವೇ ಇದೆ. ಇತಿಹಾಸ ಪುನರಾವರ್ತನೆಯಾಗುತ್ತಿರುವುದು ಕೇರಳ ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದ ಕಪ್ಪುಚುಕ್ಕೆ. 14 ವರ್ಷಗಳ ಹಿಂದೆ 2009 ಸೆಪ್ಟೆಂಬರ್ 30ರಂದು ಮುಲ್ಲಪೆರಿಯಾರ್ ಅಣೆಕಟ್ಟಿನ ಬಳಿ ತೆಕ್ಕಡಿ ಸರೋವರದ ಮಧ್ಯೆ ಹೊಚ್ಚಹೊಸ ಕೆಟಿಡಿಸಿ ಡಬಲ್ ಡೆಕ್ಕರ್ ಬೋಟ್ ಪಲ್ಟಿಯಾಗಿ 46 ಮಂದಿ ಪ್ರವಾಸಿಗರು ಕೊನೆಯುಸಿರೆಳೆದಿದ್ದರು. 2007ರಲ್ಲಿ ಕೊಚ್ಚಿ ಬಳಿಯ ತಟ್ಟೆಕಾಡ್‌ನಲ್ಲಿ ದೋಣಿ ಮುಳುಗಿ 18 ಮಂದಿ ಸಾವನ್ನಪ್ಪಿದ್ದು, ಅದರಲ್ಲಿ 15 ಮಂದಿ ಅಂಗಮಾಲಿಯಿಂದ ತಟ್ಟೆಕಾಡ್ ಪಕ್ಷಿಧಾಮಕ್ಕೆ ಪ್ರವಾಸದಿಂದ ಹಿಂತಿರುಗುತ್ತಿದ್ದ ಶಾಲಾ ಮಕ್ಕಳಾಗಿದ್ದರು.
2002ರಲ್ಲಿ ನಡೆದ ಕುಮಾರಕೋಮ್ ದೋಣಿ ಮುಳುಗಡೆ ದುರಂತದಲ್ಲಿ, 29 ಮಂದಿಯನ್ನು ಬಲಿ ತೆಗೆದುಕೊಂಡಿತ್ತು. ಅದರಲ್ಲಿ ಸಾಮಾನ್ಯ ಜನರು, PSC ಪರೀಕ್ಷೆ ಬರೆಯಲು ಪರೀಕ್ಷಾ ಕೇಂದ್ರಕ್ಕೆ ಹೋಗುತ್ತಿದ್ದ ಉದ್ಯೋಗಾಕಾಂಕ್ಷಿಗಳಾಗಿದ್ದರು. ಇವುಗಳಷ್ಟೇ ಅಲ್ಲದೆ ಕೇರಳದ ಹಿನ್ನೀರಿನ ಪ್ರವಾಸೋದ್ಯಮ ಪ್ರದೇಶದಲ್ಲಿ ಹಲವಾರು ಪ್ರವಾಸಿಗರು ವಿವಿಧ ರೀತಿಯ ಅಪಘಾತಗಳಲ್ಲಿ ಸಿಲುಕಿರುವ ಘಟನೆಗಳು ನಡೆದಿವೆ. ಪ್ರವಾಸೋದ್ಯಮದಲ್ಲಿ ಬಳಸುವ ಹಡಗುಗಳ ಸರಿಯಾದ ಫಿಟ್‌ನೆಸ್ ಮತ್ತು ಸುರಕ್ಷತಾ ತಪಾಸಣೆ ಮಾಡಲು ಹಾಗೂ ಅಲ್ಲಾಗುವ ಹಗರಣಗಳನ್ನು ಹಿಡಿಯಲು ಸರಿಯಾದ ವ್ಯವಸ್ಥೆಗಳು ಇಲ್ಲದೇ ಇರುವುದು ನಾಚಿಕೆಗೇಡಿನ ಸಂಗತಿ.
ಪ್ರವಾಸಿಗರ ಸ್ವರ್ಗ ಕೇರಳ: ರಾಜ್ಯದ ಜಲ ಪ್ರವಾಸೋದ್ಯಮ ಕ್ಷೇತ್ರ 44 ನದಿಗಳು ಮತ್ತು 34 ಹಿನ್ನೀರಿನಿಂದ ಸಮೃದ್ಧವಾಗಿದೆ. ಅದರೊಂದಿಗೆ ಕೋವಲಂ, ವರ್ಕಳ, ಆಲಪ್ಪುಳ, ಚೆರಾಯಿ, ಕೊಚ್ಚಿ, ವಡನಪಲ್ಲಿ, ಪೊನ್ನಾನಿ, ಕೋಝಿಕ್ಕೋಡ್, ಮುಝುಪಿಲಂಗಾಡ್, ಪಯ್ಯಂಬಲಂ, ಕಣ್ಣೂರು, ಬೇಕಲ್ ಸೇರಿದಂತೆ ಕಡಲತೀರ ಪ್ರವಾಸೋದ್ಯಮವನ್ನೂ ಒಳಗೊಂಡಿದೆ. ತನೂರ್ ದೋಣಿ ದುರಂತವು ತಿರುವನಂತಪುರಂ, ಕೊಲ್ಲಂ, ಅಲಪ್ಪುಳ, ಎರ್ನಾಕುಲಂ, ತ್ರಿಶೂರ್, ಮಲಪ್ಪುರಂ, ಕೋಝಿಕ್ಕೋಡ್, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳ ಜಲ ಪ್ರವಾಸೋದ್ಯಮಕ್ಕೆ ಎಚ್ಚರಿಕೆ ಗಂಟೆ.
ಕೇರಳದ ಸಮುದ್ರ ಮತ್ತು ಹಿನ್ನೀರಿನ ಸೌಂದರ್ಯವನ್ನು ಆನಂದಿಸಲು ಪ್ರತಿದಿನ ಸಾವಿರಾರು ವಿದೇಶಿ ಮತ್ತು ದೇಶೀಯ ಪ್ರವಾಸಿಗರು ಆಗಮಿಸುತ್ತಿದ್ದು, ವಾಟರ್‌ಕ್ರಾಫ್ಟ್‌ಗಳನ್ನು ಅವಲಂಬಿಸಿದ್ದಾರೆ. ಇದರೊಂದಿಗೆ ಸಣ್ಣ ನೀರಿನ ಪ್ರವಾಸೋದ್ಯಮ ಕೇಂದ್ರಗಳೂ ಸ್ಥಳೀಯ ಮಟ್ಟದಲ್ಲಿ ಪ್ರವಾಸಿಗರನ್ನು ಸೆಳೆಯುತ್ತಿವೆ. ಕೇರಳದ ಅತಿದೊಡ್ಡ ಹಿನ್ನೀರಿನ ವೆಂಬನಾಡ್ ಸರೋವರವನ್ನು ಅವಲಂಬಿಸಿ ನೂರಾರು ಹೌಸ್‌ಬೋಟ್‌ಗಳು ಅಲಪ್ಪುಳ ಮತ್ತು ಎರ್ನಾಕುಲಂ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತವೆ. ಇದೀಗ ತಾನೂರಿನಲ್ಲಿ ಸಂಭವಿಸಿರುವ ದೋಣಿ ಅಪಘಾತ ಈ ಸ್ಥಳಗಳಲ್ಲಿ ಸರಿಯಾದ ಸುರಕ್ಷತಾ ತಪಾಸಣೆಯ ಅಗತ್ಯವನ್ನು ಕೈಗೊಳ್ಳಬೇಕು ಎನ್ನುವ ಮುನ್ನೆಚ್ಚರಿಕೆ ನೀಡಿದೆ.
ಇದನ್ನೂ ಓದಿ: ಕೇರಳ ದೋಣಿ ದುರಂತದಲ್ಲಿ ಸಾವಿನ ಸಂಖ್ಯೆ 22ಕ್ಕೇರಿಕೆ: ಪ್ರಧಾನಿ ಮೋದಿ ಸಂತಾಪ