ಮಧುರೈ(ತಮಿಳುನಾಡು): ಗ್ರಾಮೀಣ ಪ್ರದೇಶದ ಯುವತಿಯರು ರಾಷ್ಟ್ರ ಮಟ್ಟದ ಪ್ರವೇಶ ಪರೀಕ್ಷೆಗಳಲ್ಲಿ ನಗರ ಪ್ರದೇಶದ ಯುವತಿಯರಿಗೆ ಸಮನಾಗಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಹೆಣ್ಣುಮಕ್ಕಳು ಅಧ್ಯಯನದಲ್ಲಿ ಉತ್ತಮ ಸಾಧನೆ ಮಾಡಿರುವ ಘಟನೆಗಳು ಹಲವು ಬಾರಿ ವರದಿಯಾಗಿದೆ. ಅಂತೆಯೇ ತಮಿಳುನಾಡಿನ ಯುವತಿಯೋರ್ವಳು ಎರಡು ಬಾರಿ ನೀಟ್‌ನಲ್ಲಿ ತೇರ್ಗಡೆಯಾಗುವ ಮೂಲಕ ಗಮನ ಸೆಳೆದಿದ್ದಾಳೆ.
ಮಧುರೈನ ಪನಮೂಪ್ಪನ್‌ಪಟ್ಟಿ ಗ್ರಾಮದ ವಿದ್ಯಾರ್ಥಿನಿ ತಂಗಪಾಚಿ ಆರ್ಥಿಕ ಕಷ್ಟದ ನಡುವೆಯೂ ನೀಟ್ ತೇರ್ಗಡೆಯಾಗಿದ್ದಾರೆ. ಆದರೆ ತೀವ್ರ ಬಡತನದಿಂದಾಗಿ ವೈದ್ಯಕೀಯ ವ್ಯಾಸಂಗ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸರ್ಕಾರ ನೆರವು ನೀಡಬೇಕೆಂದು ಆಕೆಯ ಕುಟುಂಬಸ್ಥರು ಮನವಿ ಮಾಡಿದ್ದಾರೆ.
ಸರ್ಕಾರವು ನನ್ನ ಬೋಧನಾ ಶುಲ್ಕವನ್ನು ಮಾತ್ರ ಪಾವತಿಸುತ್ತಿದೆ. ವಸತಿ ಸೇರಿದಂತೆ ಇತರ ವೆಚ್ಚಗಳಿಗೆ ನನ್ನ ಬಳಿ ಹಣವಿಲ್ಲ. ಹೀಗಾಗಿ ನಾನು ಕೃಷಿ ಕೆಲಸಕ್ಕೆ ಮುಂದಾದೆ ಎಂದು ತಮ್ಮ ಆರ್ಥಿಕ ಸಂಕಷ್ಟವನ್ನು ತಂಗಪಾಚಿ ವಿವರಿಸಿದ್ದಾರೆ.
ತಂಗಪಾಚಿ ಅವರು 2021 ಮತ್ತು 2022ರ ಶೈಕ್ಷಣಿಕ ವರ್ಷದಲ್ಲಿ ಸತತವಾಗಿ ನೀಟ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಆಕೆಯ ತಂದೆ ರೈತನಾಗಿದ್ದು, ತನ್ನ ನಾಲ್ವರು ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಲು ಇನ್ನಿಲ್ಲದ ಕಷ್ಟ ಪಡುತ್ತಿದ್ದಾರೆ. ಕಳೆದ ವರ್ಷ ವೈದ್ಯಕೀಯ ವ್ಯಾಸಂಗದ ಖರ್ಚು ಹೆಚ್ಚಾದ ಕಾರಣ ಖಾಸಗಿ ವೈದ್ಯಕೀಯ ಕಾಲೇಜಿಗೆ ದಾಖಲಾಗಲು ತಂಗಪಾಚಿಗೆ ಸಾಧ್ಯವಾಗಲಿಲ್ಲ.
ಕನ್ಯಾಕುಮಾರಿಯ ಮೂಕಾಂಬಿಕಾ ವೈದ್ಯಕೀಯ ಕಾಲೇಜಿನಲ್ಲಿ ಈಕೆಗೆ ವೈದ್ಯಕೀಯ ವ್ಯಾಸಂಗ ಮಾಡುವ ಅವಕಾಶ ಸಿಕ್ಕಿತ್ತು. ಆದರೆ ಬೋಧನಾ ಶುಲ್ಕ, ವಸತಿ, ಊಟದ ವೆಚ್ಚವನ್ನು ಕುಟುಂಬವು ಭರಿಸಲು ಶಕ್ತವಾಗಿರಲಿಲ್ಲ. ಹೀಗಾಗಿ ಅವರು ಕೃಷಿ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ. ಪ್ರತಿಭಾವಂತೆಯಾಗಿರುವ ತಂಗಪಾಚಿಗೆ ತಮಿಳುನಾಡು ಸರ್ಕಾರ ನೆರವಾಗಬೇಕಿದೆ. ಈ ಮೂಲಕ ಬಡ ಪ್ರತಿಭೆಗೆ ಅವಕಾಶ ಕಲ್ಪಿಸಿ ಆಕೆಯ ಕನಸನ್ನು ನನಸು ಮಾಡಿಕೊಳ್ಳಲು ಸಹಕರಿಸಬೇಕಿದೆ.
ಜಾಹೀರಾತು- ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ