ಕೋನುರ್(ತಮಿಳುನಾಡು): ಕಳೆದ ಕೆಲ ದಿನಗಳ ಹಿಂದೆ ಕೇಂದ್ರ ಸಚಿವ ಸಂಪುಟ ಪುನಾರಚನೆಯಾಗಿದ್ದು, ತಮಿಳುನಾಡಿನ ಬಿಜೆಪಿ ಸಂಸದ ಎಲ್. ಮುರುಗನ್ ಕೇಂದ್ರದಲ್ಲಿ ಮೀನುಗಾರಿಕೆ ಖಾತೆ ರಾಜ್ಯ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಇವರ ತಂದೆ-ತಾಯಿ ಮಾತ್ರ ಇಳಿವಯಸ್ಸಿನಲ್ಲೂ ಗದ್ದೆ ಕೆಲಸವನ್ನು ಬಿಟ್ಟಿಲ್ಲ.
ತಮಿಳುನಾಡಿನ ಕೋನುರ್ ಗ್ರಾಮದಲ್ಲಿ ವಾಸವಾಗಿರುವ ಎಲ್.ಮುರುಗನ್ ಅವರ ತಂದೆ ಲೋಕನಾಥನ್(68) ಹಾಗೂ ವರುದಮ್ಮಾಳ್ (59) ಪ್ರತಿ ದಿನ ಹೊಲಕ್ಕೆ ಹೋಗಿ ಕೆಲಸ ಮಾಡ್ತಿದ್ದು, ಪುಟ್ಟದಾದ ಗುಡಿಸಿನಲ್ಲಿ ವಾಸ ಮಾಡುತ್ತಿದ್ದಾರೆ. ಮಗ ಸಂಸದನಾಗಿ, ಇದೀಗ ಸಚಿವನಾಗಿದ್ದರೂ, ಆಡಂಬರದ ಜೀವನ ನಡೆಸುವ ಬದಲಿಗೆ ಪ್ರತಿದಿನ ಹೊಲಕ್ಕೆ ಹೋಗಿ ದುಡಿಯುತ್ತಿದ್ದು, ಇಳಿವಯಸ್ಸಿನಲ್ಲೂ ಯಾರ ಹಂಗಿಲ್ಲದೇ ಜೀವನ ನಡೆಸುತ್ತಿದ್ದಾರೆ.
ಹೆತ್ತ ಮಗ ಸಚಿವನಾಗಿದ್ದಾನೆಂದು ಇವರು ಸಂಭ್ರಮಿಸಿಲ್ಲ. ಆದರೆ ಆತ ಫೋನ್ ಮಾಡಿ ಕೇಂದ್ರ ಸಚಿವನಾಗಿರುವೆ ಎಂದು ಹೇಳಿದಾಗ ಸಂತೋಷವಾಯಿತು ಎಂದಿದ್ದಾರೆ. ನಿಜಕ್ಕೂ ನಮಗೆ ಆತನಿಗೆ ನೀಡಿರುವುದು ಯಾವ ಪೋಸ್ಟ್ ಎಂಬುದು ಗೊತ್ತಿಲ್ಲ. ಆದರೆ ದೊಡ್ಡ ಹುದ್ದೆ ಇರಬೇಕು ಎಂದುಕೊಂಡು ಸಂತೋಷಪಟ್ಟಿದ್ದೇವೆ ಅಷ್ಟೇ. ಆದರೆ ಸಂಭ್ರಮಾಚರಣೆ ಮಾಡಿಲ್ಲ ಎಂದು ತಾಯಿ ವರುದಮ್ಮಾಳ್ ತಿಳಿಸಿದ್ದಾರೆ.
ಮುರುಗನ್ ನಮ್ಮೊಂದಿಗೆ ಮಾತನಾಡಿದ್ದು, ಹೊಲಕ್ಕೆ ಹೋಗುವ ಬದಲು ಚೆನ್ನೈಗೆ ಬಂದು ಉಳಿದುಕೊಳ್ಳಿ ಎಂದಿದ್ದಾರೆ. ಅವರ ಮಾತು ಅಲ್ಲಗೆಳೆಯಲು ಸಾಧ್ಯವಿಲ್ಲದ ಕಾರಣ ಪ್ರತಿ ಆರು ತಿಂಗಳಿಗೊಮ್ಮೆ ಅಲ್ಲಿಗೆ ಹೋಗಿ ಬರುತ್ತೇವೆ. ಆದರೆ ನಾಲ್ಕು ಗೋಡೆಗಳ ಮಧ್ಯೆ ಜೀವನ ನಡೆಸಲು ನಮಗೆ ಸಾಧ್ಯವಿಲ್ಲ ಎಂದಿದ್ದಾರೆ.
ಗುಡಿಸಲಿನಲ್ಲಿ ಜೀವನ ನಡೆಸುತ್ತಿದ್ದರೂ ನಾವು ನೆಮ್ಮದಿಯಿಂದ ಇದ್ದೇವೆ. ನಮಗೆ ಯಾವುದೇ ರೀತಿಯ ಜಮೀನು ಇಲ್ಲ. ಆದರೆ ಬೇರೆಯವರ ಹೊಲಕ್ಕೆ ಹೋಗಿ ಜೀವನ ನಡೆಸುತ್ತಿದ್ದು, ನನ್ನ ಗಂಡ ಲೋಕನಾಥನ್ ಸೈಕಲ್ ತುಳಿದುಕೊಂಡು ಗದ್ದೆ ಕೆಲಸಕ್ಕೆ ಹೋಗುತ್ತಾನೆ ಎಂದು ಮಾಹಿತಿ ನೀಡಿದ್ದಾರೆ.