ಚೆನ್ನೈ : ಮಾಧ್ಯಮಗಳನ್ನು 6 ತಿಂಗಳಲ್ಲಿ ಬಿಜೆಪಿ ನಿಯಂತ್ರಿಸುತ್ತೆ ಎಂದು ಹೇಳಿದ್ದಾರೆ ಎನ್ನಲಾದ ವಿವಾದಾತ್ಮಕ ಹೇಳಿಕೆ ಸಂಬಂಧ ಖುದ್ದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಸ್ಪಷ್ಟನೆ ನೀಡಿದ್ದಾರೆ.
ಮಾಧ್ಯಮಗಳನ್ನು ನಿಯಂತ್ರಿಸುತ್ತೇವೆ ಎಂದು ಹೇಳಿದ್ದೇನೆ ಎಂಬುದು ಸುಳ್ಳು ಸುದ್ದಿ. ಬಿಜೆಪಿ ನಾಯಕರು ಹಾಗೂ ಕೇಂದ್ರ ಸರ್ಕಾರದ ನೀತಿಗಳ ಬಗ್ಗೆ ತಪ್ಪು ಮಾಹಿತಿ ನೀಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ್ದೆ. ಇಂತಹ ತಪ್ಪು ಮಾಹಿತಿ ನೀಡುವವರನ್ನು ನಿಯಂತ್ರಿಸಲಾಗುತ್ತದೆ. ಇದನ್ನೇ ತಪ್ಪಾಗಿ ಅರ್ಥೈಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಹೊಸ ಮಾಧ್ಯಮಗಳು ಅಂದ್ರೆ 1 ಯುಟ್ಯೂಬ್ ಚಾನೆಲ್ ಮಾಡಿಕೊಂಡಿರುತ್ತಾರೆ, ಟ್ವಿಟರ್ ನಿರ್ವಹಣೆ ಮಾಡುತ್ತಿರುತ್ತಾರೆ. ರಾಜಕಾರಣಿಗಳ ಬಗ್ಗೆ ಪ್ರತಿಕ್ರಿಸುತ್ತಾರೆ, ಸುಳ್ಳು ಸುದ್ದಿ ಬಿತ್ತರಿಸುವವರನ್ನು ನಿಯಂತ್ರಿಸುತ್ತೇವೆ ಎಂದು ಹೇಳಿದ್ದೇನೆ. ಸಾಂಪ್ರದಾಯಿಕ ಮಾಧ್ಯಮಗಳ ಬಗ್ಗೆ ಗೌರವ ಇದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮುಂದಿನ ಆರು ತಿಂಗಳಲ್ಲಿ ಮಾಧ್ಯಮದ ಮೇಲೆ ನಿಯಂತ್ರಣ: ಅಣ್ಣಾಮಲೈ ವಿವಾದಿತ ಹೇಳಿಕೆ
ಮುಂದಿನ 6 ತಿಂಗಳಲ್ಲಿ ಮಾಧ್ಯಮಗಳನ್ನು ಹೇಗೆ ನಿಯಂತ್ರಣ ಮಾಡ್ತೀವಿ ನೋಡ್ತಾ ಇರಿ ಎಂದು ಅಣ್ಣಾಮಲೈ ವಿವಾದಾತ್ಮಕ ಹೇಳಿಕೆ ನೀಡಿದ್ದರು ಎನ್ನಲಾಗಿತ್ತು. ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಎಲ್ ಮುರುಗನ್ ಕೇಂದ್ರದ ಮಾಹಿತಿ ಮತ್ತು ಪ್ರಸಾರ ಖಾತೆಯ ಸಚಿವರಾದ ಬಳಿಕ ಅಣ್ಣಾಮಲೈ ಅವರನ್ನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ನೇಮಿಸಲಾಗಿತ್ತು.