ಚೆನ್ನೈ (ತಮಿಳುನಾಡು): ತಮಿಳುನಾಡಿನ ಈರೋಡ್ ಜಿಲ್ಲೆಯ ತಾಳವಾಡಿಯಲ್ಲಿ ಹಗಲು ಹೊತ್ತಲ್ಲಿ ಮೂರು ಹಸುಗಳನ್ನು ಕೊಂದ ಹುಲಿ ಸೆರೆಗೆ ತಮಿಳುನಾಡು ಮತ್ತು ಕರ್ನಾಟಕ ಅರಣ್ಯ ಇಲಾಖೆಯ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ಶುರು ಮಾಡಿದ್ದಾರೆ.
ತಾಳವಾಡಿಯು ಕರ್ನಾಟಕ ಸಂರಕ್ಷಿತ ಪ್ರದೇಶದಿಂದ ಒಂದು ಕಿಮೀ ದೂರ ಹಾಗೂ ತಮಿಳುನಾಡು ಸಂರಕ್ಷಿತ ಪ್ರದೇಶದಿಂದ ಆರು ಕಿಮೀ ದೂರದಲ್ಲಿದ್ದು, ಕಳೆದ ಎರಡು ವಾರದಲ್ಲಿ ಮೂರು ಬಾರಿ ಹುಲಿ ದಾಳಿ ಮಾಡಿ ಹಸುಗಳನ್ನು ಕೊಂದಿದೆ. ಇದರಿಂದ ಸ್ಥಳೀಯ ರೈತರು ಭಯಭೀತಗೊಂಡಿದ್ದಾರೆ.
ಹೆಜ್ಜೆ ಗುರುತುಗಳ ಆಧಾರದ ಮೇಲೆ ಹಸುಗಳನ್ನು ಕೊಂದಿರುವುದು ಹುಲಿ ಎಂದೇ ಖಾತ್ರಿಯಾಗಿದೆ. ಇಲ್ಲಿನ ಬಂಜರು ಭೂಮಿಯಲ್ಲಿರುವ ಪೊದೆಗಳು ಹುಲಿಗೆ ಸುರಕ್ಷಿತ ತಾಣವಾಗಿ ಮಾರ್ಪಟ್ಟಿವೆ. ಇದರ ಸೆರೆಗಾಗಿ ಮತ್ತು ಚಲನವನಗಳ ಮೇಲೆ ನಿಗಾ ವಹಿಸಲು ಕ್ಯಾಮರಾಗಳನ್ನು ಅಳವಡಿಸಲಾಗಿದೆ ಎಂದು ಸತ್ಯಮಂಗಳಂ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯ ಹಸನೂರು ವಿಭಾಗದ ತಾಳವಾಡಿ ಅರಣ್ಯ ವಲಯದ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಅಲ್ಲದೇ, ಹುಲಿಗೆ ಅಡಗುತಾಣವಾಗಿರುವ ಪೊದೆಗಳನ್ನು ತೆರವುಗೊಳಿಸುವಂತೆ ಸಂಬಂಧಪಟ್ಟ ಹೊಲಗಳ ರೈತರಿಗೆ ಸೂಚಿಸಲಾಗಿದೆ. ತಮ್ಮ ಜಾನುವಾರುಗಳನ್ನು ಮೇಯಿಸಲು ಅರಣ್ಯ ಪ್ರದೇಶಕ್ಕೆ ಹೋಗದಂತೆ ನಿರ್ದೇಶನ ನೀಡಲಾಗಿದೆ. ಜೊತೆಗೆ, ಈಗಾಗಲೇ ಹುಲಿಗೆ ಬಾಯಿಗೆ ತುತ್ತಾದ ಹಸುಗಳ ಮಾಲೀಕರಿಗೆ ಪರಿಹಾರ ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ: ರೈತರಿಗೆ ಸಿಹಿ ಸುದ್ದಿ.. ಭತ್ತ, ತೊಗರಿ ಸೇರಿ 14 ಬೆಳೆಗಳಿಗೆ ಬೆಂಬಲ ಬೆಲೆ ಹೆಚ್ಚಿಸಿದ ಕೇಂದ್ರ ಸರ್ಕಾರ