ನವದೆಹಲಿ: ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತ ಇದೇ ಮೊದಲ ಸಲ ಭಾರತ ಸರ್ಕಾರದೊಂದಿಗೆ ಪತ್ರದ ಮೂಲಕ ಸಂವಹನ ನಡೆಸಿದ್ದು, ಕಾಬೂಲ್ ಏರ್ಪೋರ್ಟ್ನಿಂದ ಸ್ಥಗಿತಗೊಂಡಿರುವ ವಿಮಾನ ಸಂಚಾರ ಪುನಾರಂಭಿಸುವ ಮನವಿ ಮಾಡಿದೆ.
ಅಫ್ಘಾನಿಸ್ತಾನದ ನೂತನ ವಿಮಾನಯಾನ ಖಾತೆ ಸಚಿವ ಅಲ್ಹಜ್ ಹಮೀದುಲ್ಲ ಅಖುಂಝಾದಾ ಈ ಬಗ್ಗೆ ಭಾರತದ ವಿಮಾನಯಾನ ಮುಖ್ಯಸ್ಥ ಅರುಣ್ ಕುಮಾರ್ ಅವರಿಗೆ ಪತ್ರ ಬರೆದಿರುವುದಾಗಿ ತಿಳಿದು ಬಂದಿದೆ. ಸೆಪ್ಟೆಂಬರ್ 7ರಂದೇ ಈ ಪತ್ರಕ್ಕೆ ಅಲ್ಲಿನ ಸಚಿವರು ಸಹಿ ಹಾಕಿದ್ದಾರೆಂದು ವರದಿಯಾಗಿದೆ.
ಇದನ್ನೂ ಓದಿ: 'ಖುಷಿಯಿಂದ ಲಂಚ ಕೊಟ್ಟರೆ ಸ್ವೀಕರಿಸಿ..': ಬಿಎಸ್ಪಿ ಶಾಸಕಿಯ ವಿವಾದಿತ ಹೇಳಿಕೆ
ಪತ್ರದಲ್ಲಿ ಏನಿದೆ?
'ನಿಮಗೆ ಗೊತ್ತಿರುವ ಪ್ರಕಾರ ಅಮೆರಿಕ ಪಡೆಗಳು ತಮ್ಮ ದೇಶಕ್ಕೆ ಮರಳುವ ಮುನ್ನ ಕಾಬೂಲ್ ವಿಮಾನ ನಿಲ್ದಾಣಕ್ಕೆ ಹಾನಿ ಉಂಟುಮಾಡಿವೆ. ನಮ್ಮ ಮಿತ್ರರಾಷ್ಟ್ರ ಕತಾರ್ ತಾಂತ್ರಿಕ ಸಹಕಾರದಿಂದ ವಿಮಾನ ನಿಲ್ದಾಣದ ದೋಷ ಸರಿಪಡಿಸಲಾಗಿದೆ. ಇದೀಗ ಕಾಬೂಲ್ ವಿಮಾನ ನಿಲ್ದಾಣ ಪುನಾರಂಭಗೊಂಡಿದೆ. ದೇಶೀಯ ವಿಮಾನಗಳಾದ ಅರಿಯಾನ್ ಆಫ್ಘನ್ ಏರ್ಲೈನ್, ಕಾಮ್ಏರ್ ವಿಮಾನಗಳು ಭಾರತಕ್ಕೆ ಹಾರಾಟ ನಡೆಸಲು ಸಿದ್ಧಗೊಂಡಿವೆ. ಇದೀಗ ಭಾರತದ ವಿಮಾನಗಳು ಕೂಡ ಅಫ್ಘಾನಿಸ್ತಾನದ ಮೇಲೆ ಹಾರಾಟ ನಡೆಸಬಹುದು. ಭದ್ರತೆ ಬಗ್ಗೆ ಯಾವುದೇ ರೀತಿಯಿಂದಲೂ ಆತಂಕಪಡುವ ಅಗತ್ಯವಿಲ್ಲ' ಎಂಬ ಭರವಸೆಯನ್ನು ತಾಲಿಬಾನ್ ಆಡಳಿತ ನೀಡಿದೆ.
ಅಫ್ಘಾನಿಸ್ತಾನದಲ್ಲಿ ಅರಾಜಕತೆ ಉಂಟಾಗುತ್ತಿದ್ದಂತೆ ಭಾರತ ಸೇರಿದಂತೆ ಅನೇಕ ದೇಶಗಳು ಕಾಬೂಲ್ ವಿಮಾನ ನಿಲ್ದಾಣಕ್ಕೆ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಿದ್ದವು. ಇದೇ ವಿಚಾರವಾಗಿ ಕಳೆದ ಕೆಲ ದಿನಗಳ ಹಿಂದೆ ಮಾತನಾಡಿದ್ದ ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ, ಕಾಬೂಲ್ಗೆ ಪುನರ್ ವಿಮಾನಯಾನ ಸೇವೆ ಆರಂಭಿಸುವ ಭರವಸೆ ನೀಡಿದ್ದರು.