ನರಸಿಂಗಪುರ (ಮಧ್ಯಪ್ರದೇಶ): ದ್ವಾರಕಾ ಪೀಠದ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರನ್ನು ರಾಜ್ಯ ಗೌರವದೊಂದಿಗೆ ಪರಮಹಂಸಿ ಗಂಗಾ ಆಶ್ರಮದ ಆವರಣದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಭೂ ಸಮಾಧಿ ಮಾಡಲಾಯಿತು. ಈ ವೇಳೆ, ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಸಂತರು, ಭಕ್ತರು ಉಪಸ್ಥಿತರಿದ್ದರು. ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರ ನಿಧನದ ಹಿನ್ನೆಲೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ರಾಜ್ಯದಲ್ಲಿ ಒಂದು ದಿನದ ಶೋಕಾಚರಣೆ ಘೋಷಿಸಿದ್ದಾರೆ.
ಗುರು ಸಮಾಧಿಯ ಸಮಯದಲ್ಲಿ, ಅವರಿಗೆ ಮಂತ್ರ ಪಠಣದೊಂದಿಗೆ ಪವಿತ್ರ ನದಿಗಳ ನೀರಿನಿಂದ ಅಭಿಷೇಕ ಮಾಡಲಾಯಿತು. ಸಿಎಂ ಶಿವರಾಜ್ ಸಿಂಗ್ ಚೌಹಾಣ್, ಕೇಂದ್ರ ಸಚಿವ ಪ್ರಹ್ಲಾದ್ ಪಟೇಲ್, ಕೇಂದ್ರ ಸಚಿವ ಫಗ್ಗನ್ ಸಿಂಗ್ ಕುಲಸ್ತೆ, ಮಾಜಿ ಮುಖ್ಯಮಂತ್ರಿ ಕಮಲ್ ನಾಥ್, ದಿಗ್ವಿಜಯ್ ಸಿಂಗ್ ಮತ್ತು ಅವರ ಅನುಯಾಯಿಗಳು ಭೂ-ಸಮಾಧಿ ಸಮಯದಲ್ಲಿ ಆಶ್ರಮದಲ್ಲಿ ಉಪಸ್ಥಿತರಿದ್ದರು.
ನರಸಿಂಗಪುರ ತಲುಪಿದ ಸಿಎಂ ಶಿವರಾಜ್ ಸಿಂಗ್, ಶಂಕರಾಚಾರ್ಯರಿಗೆ ಅಂತಿಮ ನಮನ ಸಲ್ಲಿಸಿ ಶ್ರದ್ಧಾಂಜಲಿ ಸಲ್ಲಿಸಿದರು. ಇದೇ ವೇಳೆ, ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರ ನಿಧನಕ್ಕೆ ಸಿಎಂ ಒಂದು ದಿನದ ಶೋಕಾಚರಣೆ ಘೋಷಿಸಿ, ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದಾರೆ. ಈ ವೇಳೆ ಸಿಎಂ ಶಿವರಾಜ್ ಮಾತನಾಡಿ, ಪರಮಪೂಜ್ಯ ಶಂಕರಾಚಾರ್ಯರು ಸನಾತನ ಧರ್ಮದ ಸೂರ್ಯ. ಅವರ ನಿಧನದಿಂದ ಮಧ್ಯಪ್ರದೇಶ ನಿರ್ಜನವಾಗಿದೆ. ಶಂಕರಾಚಾರ್ಯರು ಸ್ವಾತಂತ್ರ್ಯ ಹೋರಾಟಗಾರರೂ ಆಗಿದ್ದರು ಎಂದು ಹೇಳಿದರು.
ಇದನ್ನೂ ಓದಿ: ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದರ ಉತ್ತರಾಧಿಕಾರಿ ಸ್ವಾಮಿ ಅವಿಮುಕ್ತೇಶ್ವರಾನಂದ
ಶ್ರದ್ಧಾಂಜಲಿ ಸಲ್ಲಿಸಿದ ಮಾಜಿ ಸಿಎಂ: ಮಾಜಿ ಸಿಎಂ ಕಮಲ್ ನಾಥ್ ಶ್ರದ್ಧಾಂಜಲಿ ಸಲ್ಲಿಸಿದರು. ಬಳಿಕ ಮಾತನಾಡಿ, ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರ ನಿಧನದಿಂದ ದೇಶಕ್ಕೆ ದೊಡ್ಡ ನಷ್ಟ ವಾಗಿದೆ. ಅವರ ಆಶೀರ್ವಾದ ದೇಶ ಮತ್ತು ರಾಜ್ಯದ ಮೇಲೆ ಸದಾ ಇರುತ್ತದೆ ಎಂದರು.
ಕ್ರಾಂತಿಕಾರಿ ಸಾಧು: ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದಕ್ಕಾಗಿ ಅವರನ್ನು ಒಂದು ಕಾಲದಲ್ಲಿ ಕ್ರಾಂತಿಕಾರಿ ಸಾಧು ಎಂದು ಕರೆಯಲಾಗುತ್ತಿತ್ತು. ಸ್ವರೂಪಾನಂದ ಸರಸ್ವತಿ ಅವರು 1924 ರಲ್ಲಿ ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯ ದಿಘೋರಿ ಗ್ರಾಮದಲ್ಲಿ ಪೋತಿರಾಮ್ ಉಪಾಧ್ಯಾಯರಾಗಿ ಜನಿಸಿದರು. ಅವರು ದೇವರನ್ನು ಹುಡುಕಲು 9 ನೇ ವಯಸ್ಸಿನಲ್ಲಿ ತಮ್ಮ ಮನೆಯನ್ನು ತೊರೆದರು. ಅವರು 1942 ರಲ್ಲಿ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದರು ಮತ್ತು "ಕ್ರಾಂತಿಕಾರಿ ಸಾಧು" ಎಂದು ಕರೆಯಲ್ಪಟ್ಟರು. ಅವರು ಎರಡು ಬಾರಿ ಜೈಲು ಶಿಕ್ಷೆಯನ್ನೂ ಅನುಭವಿಸಿದ್ದರು.