ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಭರ್ಜರಿ ಗೆಲುವು ದಾಖಲಿಸಿ, ಐತಿಹಾಸಿಕ ಸಾಧನೆ ಮಾಡಿದೆ. ಆದರೆ ಇದರ ಮಧ್ಯೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ಕ್ಷೇತ್ರದಲ್ಲಿ ಸೋಲು ಕಂಡಿದ್ದಾರೆ.
ನಂದಿಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ವಿರುದ್ಧ ಸ್ಪರ್ಧಿಸಿದ್ದ ಮಮತಾ ಬ್ಯಾನರ್ಜಿ 1,736 ಮತಗಳ ಅಂತರದಿಂದ ಸೋಲು ಕಂಡಿದ್ದಾರೆ. ಈ ಮೂಲಕ ಅನೇಕ ಹಗ್ಗ-ಜಗ್ಗಾಟದ ಬಳಿಕ ನಂದಿಗ್ರಾಮ ಫಲಿತಾಂಶ ಬಿಜೆಪಿ ಪರ ವಾಲಿದೆ.
ಆರಂಭದಲ್ಲಿ ಮಮತಾ ಬ್ಯಾನರ್ಜಿ 1200 ಮತಗಳಿಂದ ಗೆಲುವು ದಾಖಲಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು. ಇದಾದ ಬಳಿಕ ಸುವೇಂದು ಅಧಿಕಾರಿ ಗೆಲುವು ಸಾಧಿಸಿದ್ದಾರೆ ಎನ್ನಲಾಗುತ್ತಿದ್ದಂತೆ ಟಿಎಂಸಿ ಮರುಮತ ಎಣಿಕೆ ಮಾಡುವಂತೆ ಸೂಚನೆ ನೀಡಿತ್ತು. ಇದೀಗ ಫಲಿತಾಂಶ ಬಹಿರಂಗಗೊಂಡಿದ್ದು, ಮಮತಾ ವಿರುದ್ಧ ಸುವೇಂದು ಅಧಿಕಾರಿ ಜಯ ಸಾಧಿಸಿದ್ದಾರೆ.
ಚುನಾವಣೆ ಘೋಷಣೆಯಾದಾಗಿನಿಂದಲೂ ಭಾರಿ ಗಮನ ಸೆಳೆದಿದ್ದ ನಂದಿಗ್ರಾಮದಲ್ಲಿ ಬಿಜೆಪಿಯ ಸುವೇಂದು ಅಧಿಕಾರಿ ಅಖಾಡಕ್ಕಿಳಿದಿದ್ದರು. ಇದೇ ಕ್ಷೇತ್ರದಿಂದ ಮಮತಾ ಬ್ಯಾನರ್ಜಿ ಕೂಡ ಕಣಕ್ಕಿಳಿದಿದ್ದರು. ಈ ಕ್ಷೇತ್ರದಲ್ಲಿ ಮಮತಾ ಬ್ಯಾನರ್ಜಿ ಚುನಾವಣೆ ಪ್ರಚಾರ ನಡೆಸುತ್ತಿದ್ದ ವೇಳೆ ಅವರ ಮೇಲೆ ಹಲ್ಲೆ ನಡೆದಿತ್ತು. ಇದಾದ ಬಳಿಕ ವ್ಹೀಲ್ಚೇರ್ ಮೇಲೆ ಕುಳಿತುಕೊಂಡು ಅವರು ಪ್ರಚಾರದಲ್ಲಿ ಭಾಗಿಯಾಗಿದ್ದರು.
ಮತ ಎಣಿಕೆ ಆರಂಭಗೊಂಡಾಗಿನಿಂದಲೂ ಈ ಕ್ಷೇತ್ರದಲ್ಲಿ ಸುವೇಂದು ಹಾಗೂ ಮಮತಾ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ವಿಶೇಷವೆಂದರೆ ಸುವೇಂದು ಅಧಿಕಾರಿ ಒಂದು ಕಾಲದಲ್ಲಿ ಮಮತಾ ಬ್ಯಾನರ್ಜಿ ಆಪ್ತಸಹಾಯಕನಾಗಿ ಗುರುತಿಸಿಕೊಂಡಿದ್ದರು. ಆದರೆ ಈ ಸಲದ ವಿಧಾನಸಭೆಯಲ್ಲಿ ಮಮತಾ ಬ್ಯಾನರ್ಜಿ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವಿನ ಪತಾಕೆ ಹಾರಿಸಿದ್ದಾರೆ.