ನಂದಿಗ್ರಾಮ: ನಂದಿಗ್ರಾಮ ಕ್ಷೇತ್ರ ಜಿದ್ದಾ ಜಿದ್ದಿ ಚುನಾವಣೆಗೆ ಸಾಕ್ಷಿಯಾಗಿದೆ. ಇಂದು ಪಶ್ಚಿಮ ಬಂಗಾಳದಲ್ಲಿ ಎರಡನೇ ಹಂತದ ಚುನಾವಣೆ ನಡೆಯುತ್ತಿದ್ದು, ನಂದಿಗ್ರಾಮ ವಿಶ್ವದ ಗಮನ ಸೆಳೆದಿದೆ.
ಇನ್ನು ಬೆಳಗ್ಗೆಯೇ ಕ್ಷೇತ್ರದಲ್ಲಿ ಬಿರುಸಿನ ಮತದಾನ ನಡೆಯುತ್ತಿದೆ. ಪ್ರತಿಷ್ಠಿತ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಮಮತಾ ಬ್ಯಾನರ್ಜಿ ಅವರ ಮಾಜಿ ಆಪ್ತ ಸುವೇಂದು ಅಧಿಕಾರಿ ನಂದಿಗ್ರಾಮದ ನಂದನಏಕ್ಬರ್ ಶಾಲೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು. ಮತ ಚಲಾಯಿಸಿದ ಬಳಿಕ ಮಾತನಾಡಿದ ಸುವೇಂದು ಅಧಿಕಾರಿ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು.
ನಂದಿಗ್ರಾಮದಲ್ಲಿ ಪರಿಸ್ಥಿತಿ ಸಕಾರಾತ್ಮಕವಾಗಿದೆ. ಜನ ಬದಲಾವಣೆ ಬಯಸಿದ್ದಾರೆ ಎಂದು ಹೇಳಿದರು. ನಂದಿಗ್ರಾಮದಲ್ಲಿ ಸಿಎಂ ಮಮತಾ ಬ್ಯಾನರ್ಜಿ ಟಿಎಂಸಿ ಅಭ್ಯರ್ಥಿ ಆಗಿದ್ದಾರೆ. ಈ ಹಿಂದೆ ಸುವೇಂದು ಅಧಿಕಾರಿ ಮಮತಾ ಬ್ಯಾನರ್ಜಿ ಅವರ ಕ್ಯಾಬಿನೆಟ್ನಲ್ಲಿ ಪ್ರಭಾವಿ ಸಚಿವರಾಗಿದ್ದರು. ಅಳಿಯನಿಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ ಎಂದು ಆರೋಪಿಸಿ ಟಿಎಂಸಿ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದರು.
ನಂದಿಗ್ರಾಮ ಟಾಟಾ ಕಂಪನಿ ವಿರುದ್ಧದ ಹೋರಾಟದಲ್ಲಿ ಮುಂಚೂಣಿಗೆ ಬಂದಿತ್ತು. ಇದೇ ಹೋರಾಟ ಟಿಎಂಸಿ ಬಂಗಾಳದ ಚುಕ್ಕಾಣಿ ಹಿಡಿಯುವಂತೆ ಮಾಡಿತ್ತು. ನಂದಿಗ್ರಾಮ ಹೋರಾಟದಲ್ಲಿ ಸುವೇಂದು ಅಧಿಕಾರಿ ಮುಂಚೂಣಿಯಲ್ಲಿದ್ದರು. ಈ ಮೂಲಕ ಮಮತಾ ಬ್ಯಾನರ್ಜಿ ಅವರ ನೀಲಿಗಣ್ಣಿನ ಹುಡುಗ ಸಹ ಆಗಿದ್ದರು.
ಇದೀಗ ಎಲ್ಲ ಉಲ್ಟಾ ಆಗಿದ್ದು, ದೀದಿಗೆ ಸೆಡ್ಡು ಹೊಡೆದು ಅವರ ವಿರುದ್ಧವೇ ಸುವೇಂದು ಅಧಿಕಾರಿ ಸೆಣಸಾಣ ನಡೆಸಿದ್ದಾರೆ. ಹೀಗಾಗಿ ನಂದಿಗ್ರಾಮ ದೇಶದ ಗಮನ ಸೆಳೆದಿದ್ದು, ಪ್ರತಿಷ್ಠೆಯ ಕಣವಾಗಿದೆ.