ಪಾಲಿ (ರಾಜಸ್ಥಾನ): ಬಾಂದ್ರಾದಿಂದ ಜೋಧ್‌ಪುರಕ್ಕೆ ಬರುತ್ತಿದ್ದ ಸೂರ್ಯನಗರಿ ಎಕ್ಸ್‌ಪ್ರೆಸ್ ರೈಲು ಇಂದು ನಸುಕಿನ ಜಾವ 3.27ಕ್ಕೆ ಪಾಲಿ ನಿಲ್ದಾಣ ತಲುಪುವ ಮುನ್ನವೇ ಹಳಿ ತಪ್ಪಿದೆ. ರೈಲಿನ 8 ಸ್ಲೀಪರ್ ಕೋಚ್‌ಗಳು ಸೇರಿದಂತೆ 9 ಬೋಗಿಗಳು ಪಲ್ಟಿಯಾಗಿವೆ. 3 ಬೋಗಿಗಳು ಹಳಿತಪ್ಪಿವೆ. ಅಪಘಾತದಲ್ಲಿ 24ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.
ವಾಯುವ್ಯ ರೈಲ್ವೆಯ ಸಿಪಿಆರ್ಒ ಅಧಿಕಾರಿ ವಿಜಯ್ ಶರ್ಮಾ ಪ್ರತಿಕ್ರಿಯಿಸಿ, 'ಅಪಘಾತದ ಬಗ್ಗೆ ಮಾಹಿತಿ ಬಂದ ತಕ್ಷಣ ಜೋಧ್‌ಪುರದಿಂದ ಪರಿಹಾರ ರೈಲನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಈಗಾಗಲೇ ಉನ್ನತ ಅಧಿಕಾರಿಗಳು ಸ್ಥಳ ತಲುಪಿದ್ದಾರೆ. ಮಾಹಿತಿಯ ಪ್ರಕಾರ, ರೈಲು ಸಂಖ್ಯೆ 12480 ಬಾಂದ್ರಾ ಟರ್ಮಿನಸ್‌ನಿಂದ ಹೊರಟಿದ್ದ ಜೋಧ್‌ಪುರ ಸೂರ್ಯನಗರಿ ಎಕ್ಸ್ಪ್ರೆಸ್ನ 12 ಕೋಚ್‌ಗಳು ಮುಂಜಾವು 03.27ಕ್ಕೆ ಜೋಧ್‌ಪುರ ವಿಭಾಗದ ರಾಜ್‌ಕಿವಾಸ್-ಬೊಮದರಾ ಮಾರ್ಗಮಧ್ಯೆ ಹಳಿ ತಪ್ಪಿವೆ' ಎಂದು ಹೇಳಿದರು.
'ಜನರಲ್ ಮ್ಯಾನೇಜರ್-ನಾರ್ತ್ ವೆಸ್ಟರ್ನ್ ರೈಲ್ವೇ ಮತ್ತು ಇತರ ಉನ್ನತಾಧಿಕಾರಿಗಳು ಜೈಪುರದ ಪ್ರಧಾನ ಕಚೇರಿಯಲ್ಲಿರುವ ನಿಯಂತ್ರಣ ಕೊಠಡಿಯಲ್ಲಿ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಘಟನೆಯಲ್ಲಿ 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಗಂಭೀರವಾಗಿ ಗಾಯಗೊಂಡಿರುವವರು ಮತ್ತು ಪ್ರಾಣಹಾನಿ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಪ್ರಯಾಣಿಕರು ತಮ್ಮ ಗಮ್ಯಸ್ಥಾನಗಳನ್ನು ತಲುಪಲು ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ' ಎಂದು ವಾಯುವ್ಯ ರೈಲ್ವೆ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಪ್ರಯಾಣಿಕರು ಮತ್ತು ಸಂಬಂಧಿತ ಕುಟುಂಬ ಸದಸ್ಯರು ತಮ್ಮ ಸಂಬಂಧಿಕರ ಬಗ್ಗೆ ಮಾಹಿತಿ ತಿಳಿಯಲು ಸಹಾಯವಾಣಿ ತೆರೆಯಲಾಗಿದೆ. ಜೋಧ್‌ಪುರ್ ಜನರು: 02912654979, 02912654993, 02912624125, 02912431646 ಸಂಖ್ಯೆಯನ್ನೂ, ಪಾಲಿ ಮಾರ್ವಾರ್ ಜನರು: 02932250324 ಮತ್ತು ಪ್ರಯಾಣಿಕರು ಮತ್ತು ಅವರ ಕುಟುಂಬಗಳು ಸಹ 138 ಮತ್ತು 1072 ಸಂಖ್ಯೆಗೆ ಕರೆ ಮಾಡಿ ಮಾಹಿತಿ ತಿಳಿಯಬಹುದು ಎಂದು ವಾಯುವ್ಯ ರೈಲ್ವೆ ಅಧಿಕಾರಿ ಸೂಚಿಸಿದ್ದಾರೆ.
'ಮಾರ್ವಾರ್ ಜಂಕ್ಷನ್‌ನಿಂದ ಹೊರಡುವ 5 ನಿಮಿಷಗಳ ಬಳಿಕ ರೈಲಿನೊಳಗೆ ಕಂಪನದ ಶಬ್ದ ಕೇಳಿಸಿತು. ಇದಾಗಿ 2-3 ನಿಮಿಷಗಳ ನಂತರ ರೈಲು ನಿಂತಿದೆ. ನಾವು ಕೆಳಗಿಳಿದು ನೋಡಿದಾಗ ಕನಿಷ್ಠ 8 ಸ್ಲೀಪರ್ ಕ್ಲಾಸ್ ಕೋಚ್‌ಗಳು ಸೇರಿದಂತೆ 12 ಬೋಗಿಗಳು ಹಳಿಯಿಂದ ನೆಲಕ್ಕೆ ಬಿದ್ದಿದ್ದವು. ಇದಾದ 15-20 ರೊಳಗೆ ನಿಮಿಷಗಳು ಆಂಬ್ಯುಲೆನ್ಸ್‌ಗಳು ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯ ಕೈಗೊಂಡವು' ಎಂದು ಪ್ರಯಾಣಿಕರೊಬ್ಬರು ಮಾಹಿತಿ ನೀಡಿದ್ದಾರೆ. ಘಟನೆಯ ಬಗ್ಗೆ ಇನ್ನಷ್ಟು ಮಾಹಿತಿ ತಿಳಿದು ಬರಬೇಕಾಗಿದೆ.
ಇದನ್ನೂ ಓದಿ: ಭೀಕರ ರಸ್ತೆ ಅಪಘಾತ: ದೇವಸ್ಥಾನಕ್ಕೆ ಬಂದಿದ್ದ ಎಂಟು ಜನರ ದುರ್ಮರಣ