ಸೂರತ್ (ಗುಜರಾತ್): ಪ್ರಥಮ ವರ್ಷದ ಸ್ನಾತಕೋತ್ತರ ಪದವೀಧರ ವೈದ್ಯರೊಬ್ಬರು ಹಿರಿಯ ವೈದ್ಯರ ಮುಂದೆಯೇ ಆತ್ಮಹತ್ಯೆಗೆ ಯತ್ನಿಸಿದ ಆಘಾತಕಾರಿ ಘಟನೆ ಗುಜರಾತ್ನ ಸೂರತ್ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ ನಡೆದಿದೆ. ಆತ್ಮಹತ್ಯೆಗೆ ಯತ್ನಿಸಿದ ವೈದ್ಯ ಅಪಾಯದಿಂದ ಪಾರಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಅವರ ಆರೋಗ್ಯ ಸ್ಥಿರವಾಗಿದೆ. ಆದರೆ, ಈ ಘಟನೆಗೆ ನಿಖರ ಕಾರಣವೇನು ಎಂಬುದು ಇನ್ನೂ ಗೊತ್ತಾಗಿಲ್ಲ ಎಂದು ವರದಿಯಾಗಿದೆ.
ವೈದ್ಯನ ಈ ಯತ್ನಕ್ಕೆ ಕಾರಣ ಏನು?: ಇಲ್ಲಿನ ಮಜುರಗೇಟ್‌ನಲ್ಲಿರುವ ನ್ಯೂ ಸಿವಿಲ್ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ ಮಾರಣಾಂತಿಕ ಇಂಜೆಕ್ಷನ್ನ ದ್ರವ ಸೇವಿಸುವ ಮೂಲಕ ಯುವ ವೈದ್ಯ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಹಿರಿಯ ವೈದ್ಯರ ಸಮ್ಮುಖದಲ್ಲೇ ಆತ್ಮಹತ್ಯೆಗೆ ಮುಂದಾಗಿದ್ದು, ಚರ್ಚೆಗೆ ಗ್ರಾಸವಾಗಿದೆ. ಕೆಲಸದ ಒತ್ತಡ ಅಥವಾ ಇನ್ಯಾವುದೇ ಕಾರಣದಿಂದಾಗಿ ವೈದ್ಯರ ಈ ನಿರ್ಧಾರಕ್ಕೆ ಬಂದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಕೆಲಸದ ಹೊರೆಯಿಂದ ಆತ್ಮಹತ್ಯೆಗೆ ಯತ್ನಿಸಿರುವ ಸಾಧ್ಯತೆ ಇದೆ ಎಂದು ಕೆಲ ವೈದ್ಯರು ಹೇಳಿದ್ದಾರೆ.
ಮುಂದುವರಿದ ಚಿಕಿತ್ಸೆ, ಯುವ ವೈದ್ಯನ ಆರೋಗ್ಯ ಸ್ಥಿರ: ಆಸ್ಪತ್ರೆಯ ಕೋವಿಡ್ ವಾರ್ಡ್ನಲ್ಲಿ ಈ ವೈದ್ಯ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ. ಮಾರಣಾಂತಿಕ ಇಂಜೆಕ್ಷನ್ನ ದ್ರವ ಸೇವಿಸಿ ತಕ್ಷಣವೇ ಎಂಐಸಿಯುಗೆ ದಾಖಲಿಸಿ ಚಿಕಿತ್ಸೆ ಆರಂಭಿಸಲಾಯಿತು. 3 ರಿಂದ 5 ಮಿಲಿ ಲೀಟರ್ ದ್ರವ ಸೇವಿಸಿರುವ ಅನುಮಾನ ಕೂಡ ವ್ಯಕ್ತವಾಗಿದೆ. ಸದ್ಯಕ್ಕೆ ಚಿಕಿತ್ಸೆ ಮುಂದುವರೆದಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಘಟನೆ ಬಗ್ಗೆ ಆಸ್ಪತ್ರೆ ಅಧೀಕ್ಷಕರು ಹೇಳಿದ್ದಿಷ್ಟು: ಈ ಕುರಿತು ಆಸ್ಪತ್ರೆಯ ಅಧೀಕ್ಷಕ ಡಾ. ಗಣೇಶ ಗೌರೆಕರೆ ಪ್ರತಿಕ್ರಿಯಿಸಿ, ಈ ಘಟನೆ ಕುರಿತು ಆತ್ಮಹತ್ಯೆಗೆ ಯತ್ನಿಸಿದ ವೈದ್ಯರಿಂದ ಮಾಹಿತಿ ಪಡೆಯಲು ಪ್ರಯತ್ನಿಸಲಾಗಿದೆ. ಈ ಮಾಡಲು ಕಾರಣವೇನು ಎಂದು ಪ್ರಶ್ನಿಸಿದರೂ ಅವರು ಇನ್ನೂ ಏನನ್ನೂ ಹೇಳಿಲ್ಲ. ಕೆಲಸದ ಹೊರೆ ಅಥವಾ ಇನ್ಯಾವುದೇ ಕಾರಣವನ್ನು ಅವರು ಇನ್ನೂ ಬಹಿರಂಗಪಡಿಸಿಲ್ಲ. ಸದ್ಯ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆಯ ಹಿಂದಿನ ಕಾರಣವೇನು ಎಂಬುವುದನ್ನು ಪತ್ತೆ ಹಚ್ಚಲು ಎಂದು ಕ್ರಮ ವಹಿಸಲಾಗುವುದು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಬಿಜೆಪಿ ಮುಖಂಡನ ಶವ ಪತ್ತೆ: ಟಿಎಂಸಿ ಕೈವಾಡ ಎಂದ ಕಮಲ ಪಡೆ
ಟೀ ಕೊಡಲಿಲ್ಲ ಎಂದು ಆಪರೇಷನ್ ಅರ್ಧಕ್ಕೆ ನಿಲ್ಲಿಸಿ ಹೊರ ನಡೆದಿದ್ದ ವೈದ್ಯರು: ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಮಹಿಳೆಯರಿಗೆ ಆಫರೇಷನ್ ಮಾಡಬೇಕಾಗಿದ್ದ ವೈದ್ಯರೊಬ್ಬರು, ತಮಗೆ ಕೇಳಿದ ತಕ್ಷಣ ಟೀ ಕೊಡಲಿಲ್ಲ ಎಂಬ ಕಾರಣಕ್ಕೆ ಅರವಳಿಕೆ ನೀಡಿದ ಬಳಿಕ ಆಪರೇಷನ್ ಮಾಡುವುದನ್ನು ಅರ್ಧಕ್ಕೆ ನಿಲ್ಲಿಸಿ ಹೊರ ನಡೆದಿದ್ದರು.