ನವ ದೆಹಲಿ: 2018ರ ಡಿಸೆಂಬರ್ 12ರಂದು ನಡೆದ ಕೊಲಿಜಿಯಂ ಸಭೆಯ ವಿವರಗಳನ್ನು ಬಹಿರಂಗಪಡಿಸುವಂತೆ ಕೋರಿ ಮಾಹಿತಿ ಹಕ್ಕು ಕಾಯ್ದೆಯಡಿ(ಆರ್‌ಟಿಐ) ಸಲ್ಲಿಸಲಾಗಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿತು.
ಕೊಲಿಜಿಯಂನ ಎಲ್ಲಾ ಸದಸ್ಯರು ಸೇರಿ ರಚಿಸಿದ ಮತ್ತು ಸಹಿ ಮಾಡಿದ ನಿರ್ಣಯಗಳನ್ನು ಮಾತ್ರ ಅಂತಿಮ ನಿರ್ಧಾರ ಎಂದು ಹೇಳಬಹುದು. ಸದಸ್ಯರ ನಡುವೆ ಚರ್ಚೆ ಮತ್ತು ಸಮಾಲೋಚನೆಯ ಮೇಲೆ ರಚಿಸಲಾದ ತಾತ್ಕಾಲಿಕ ನಿರ್ಣಯಗಳು ಅವರೆಲ್ಲರೂ ಸಹಿ ಮಾಡದ ಹೊರತು ಅಂತಿಮವೆಂದು ಹೇಳಲಾಗುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಎಂ.ಆರ್. ಷಾ ಮತ್ತು ಸಿ.ಟಿ. ರವಿಕುಮಾರ್ ಅವರ ಪೀಠ ಹೇಳಿದೆ.
ಕೊಲಿಜಿಯಂ ಬಹು-ಸದಸ್ಯ ಸಂಸ್ಥೆಯಾಗಿದೆ. ಅದರ ತಾತ್ಕಾಲಿಕ ನಿರ್ಧಾರವನ್ನು ಸಾರ್ವಜನಿಕ ವೇದಿಕೆಗೆ ತರಲು ಸಾಧ್ಯವಿಲ್ಲ. ಮಾಧ್ಯಮ ವರದಿಗಳು ಮತ್ತು ಕೊಲಿಜಿಯಂನ ಮಾಜಿ ಸದಸ್ಯರ ಸಂದರ್ಶನದ ಮೇಲೆ ತಾನು ಅವಲಂಬಿತನಾಗಲು ಸಾಧ್ಯವಿಲ್ಲ ಮತ್ತು ಮಾಜಿ ನ್ಯಾಯಾಧೀಶರು ನೀಡಿದ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸಲು ಬಯಸುವುದಿಲ್ಲ ಎಂದು ಕೋರ್ಟ್ ಹೇಳಿದೆ.
ನ್ಯಾಯಮೂರ್ತಿ ಎಂ.ಬಿ. ಲೋಕೂರ್ ಅವರ ನಿವೃತ್ತಿಯಿಂದಾಗಿ ಸಂಯೋಜನೆಯಲ್ಲಿ ಬದಲಾವಣೆಗೊಂಡ ಕೊಲಿಜಿಯಂ ಜನವರಿ 10, 2019 ರಂದು ಅಂಗೀಕರಿಸಿದ ನಿರ್ಣಯದಲ್ಲಿ, ಡಿಸೆಂಬರ್ 12, 2018 ರಂದು ತನ್ನ ಸಭೆಯಲ್ಲಿ ಕೆಲವು ಹೆಸರುಗಳ ಬಗ್ಗೆ ಸಮಾಲೋಚನೆಗಳನ್ನು ಮಾತ್ರ ನಡೆಸಲಾಯಿತು. ಆದರೆ ಯಾವುದೇ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಿಲ್ಲ ಎಂದು ಉಲ್ಲೇಖಿಸಿದೆ.
2018 ರ ಡಿಸೆಂಬರ್ 12 ರಂದು ನಡೆದ ಸುಪ್ರೀಂ ಕೋರ್ಟ್ ಕೊಲಿಜಿಯಂ ಸಭೆಯ ಕಾರ್ಯಸೂಚಿಯನ್ನು ನೀಡಬೇಕೆಂಬ ತನ್ನ ಅರ್ಜಿಯನ್ನು ವಜಾಗೊಳಿಸಿದ ದೆಹಲಿ ಹೈಕೋರ್ಟ್ ಆದೇಶದ ವಿರುದ್ಧ ಆರ್‌ಟಿಐ ಕಾರ್ಯಕರ್ತೆ ಅಂಜಲಿ ಭಾರದ್ವಾಜ್ ಎಂಬುವರು ಸಲ್ಲಿಸಿದ ಅರ್ಜಿಯ ಮೇಲೆ ಸುಪ್ರೀಂ ಕೋರ್ಟ್ ಈ ತೀರ್ಪು ನೀಡಿದೆ. ಸುಪ್ರೀಂ ಕೋರ್ಟ್ಗೆ ಕೆಲ ನ್ಯಾಯಮೂರ್ತಿಗಳನ್ನು ನೇಮಿಸುವ ಕುರಿತಂತೆ ಕೆಲವೊಂದು ನಿರ್ಧಾರಗಳನ್ನು ಆ ಸಭೆಯಲ್ಲಿ ಕೈಗೊಳ್ಳಲಾಗಿತ್ತು ಎಂದು ಅರ್ಜಿದಾರರು ಹೇಳಿದ್ದರು.
ಇದನ್ನೂ ಓದಿ: ಕೆಪಿಎಸ್ಸಿಗೆ ಸದಸ್ಯರ ನೇಮಕ ಸುಪ್ರೀಂಕೋರ್ಟ್ ಕೊಲಿಜಿಯಂ ಮಾದರಿಯಲ್ಲಾಗಬೇಕು: ಎ.ಟಿ.ರಾಮಸ್ವಾಮಿ