ನವದೆಹಲಿ: ಒಕ್ಕಲಿಗರು ಮತ್ತು ಲಿಂಗಾಯತರಿಗೆ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ಕೋಟಾ ತಲಾ ಶೇ.2ರಷ್ಟು ಹೆಚ್ಚಿಸಲು ಮುಸ್ಲಿಮರ ಶೇ.4ರಷ್ಟು ಮೀಸಲಾತಿಯನ್ನು ರದ್ದುಗೊಳಿಸಿರುವ ಕರ್ನಾಟಕ ಸರ್ಕಾರದ ನಿರ್ಧಾರವು ಮೇಲ್ನೋಟಕ್ಕೆ ದೋಷಪೂರಿತವಾಗಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಮುಸ್ಲಿಮರಿಗಿದ್ದ ಮೀಸಲಾತಿಯನ್ನು ರದ್ದುಗೊಳಿಸಿದ ಕರ್ನಾಟಕ ಸರ್ಕಾರದ ಅಧಿಸೂಚನೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಗೆ ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್ ಮತ್ತು ನ್ಯಾ.ಬಿ.ವಿ.ನಾಗರತ್ನ ಅವರ ನೇತೃತ್ವದ ನ್ಯಾಯಪೀಠವು ಒಪ್ಪಿಗೆ ಸೂಚಿಸಿದೆ.
ಕರ್ನಾಟಕದ ಮುಸ್ಲಿಂ ಸಮುದಾಯದ ಸದಸ್ಯರ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ದುಷ್ಯಂತ್ ದವೆ ಮತ್ತು ಗೋಪಾಲ್ ಶಂಕರನಾರಾಯಣನ್ ಅವರು, ಮುಸ್ಲಿಮರ ಕೋಟಾವನ್ನು ರದ್ದುಗೊಳಿಸಲು ಯಾವುದೇ ಅಧ್ಯಯನ ನಡೆಸಿಲ್ಲ. ಯಾವುದೇ ಪ್ರಾಯೋಗಿಕ ಮಾಹಿತಿಯು ಸರ್ಕಾರದ ಬಳಿ ಲಭ್ಯವಿಲ್ಲ ಎಂದು ನ್ಯಾಯಪೀಠದ ಗಮನ ಸೆಳೆದರು.
ಇದನ್ನೂ ಓದಿ: 2ಸಿಗೆ ಒಕ್ಕಲಿಗ, 2ಡಿಗೆ ಲಿಂಗಾಯತ, ಇಡ್ಲ್ಯೂಎಸ್ಗೆ ಮುಸ್ಲಿಂ: ಒಬಿಸಿ ಮೀಸಲಾತಿ ಮರು ವರ್ಗೀಕರಿಸಿ ಸರ್ಕಾರದ ಆದೇಶ
ಕರ್ನಾಟಕ ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಅರ್ಜಿಗಳಿಗೆ ಉತ್ತರಗಳನ್ನು ಸಲ್ಲಿಸಲು ಸ್ವಲ್ಪ ಕಾಲಾವಕಾಶ ಕೋರಿದರು. ಅರ್ಜಿದಾರರು ಪ್ರಶ್ನಿಸಿರುವ ಮಾರ್ಚ್ 24ರ ಸರ್ಕಾರಿ ಆದೇಶದ ಆಧಾರದ ಮೇಲೆ ಈ ಮಧ್ಯೆ ಯಾವುದೇ ನೇಮಕಾತಿ ಮತ್ತು ಪ್ರವೇಶಗಳನ್ನು ಮಾಡಲಾಗುವುದಿಲ್ಲ ಎಂದು ಪೀಠಕ್ಕೆ ಭರವಸೆ ನೀಡಿದರು.
ಮತ್ತೊಂದೆಡೆ, ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯದವರ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ, ಅರ್ಜಿಗಳಿಗೆ ಪ್ರತಿಕ್ರಿಯೆ ನೀಡಲು ಅವಕಾಶ ನೀಡದೆ ಯಾವುದೇ ಮಧ್ಯಂತರ ಆದೇಶ ನೀಡಬಾರದು ಎಂದು ಮನವಿ ಮಾಡಿದರು. ಎರಡು ಕಡೆಗಳ ವಾದ ಆಲಿಸಿದ ಪೀಠವು ಏಪ್ರಿಲ್ 18ಕ್ಕೆ ವಿಚಾರಣೆ ಮುಂದೂಡಿತು. ಇದೇ ವೇಳೆ ತಮ್ಮ ಪ್ರತಿಕ್ರಿಯೆಗಳನ್ನು ಸಲ್ಲಿಸಲು ಸಾಲಿಸಿಟರ್ ಜನರಲ್ ಮೆಹ್ತಾ ಮತ್ತು ಒಕ್ಕಲಿಗ ಮತ್ತು ಲಿಂಗಾಯತರ ಪರ ವಕೀಲ ರೋಹಟಗಿ ಅವರಿಗೆ ಸೂಚಿಸಿತು.
ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗುವ ಕೆಲ ವಾರಗಳ ಮುನ್ನ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಮರಿಗಿದ್ದ ಶೇ.4ರಷ್ಟು ಮೀಸಲಾತಿಯನ್ನು ರದ್ದುಗೊಳಿಸಲು ಬಸವರಾಜ ಬೊಮ್ಮಾಯಿ ಸರ್ಕಾರ ನಿರ್ಧರಿಸಿತ್ತು. ಇದೇ ವೇಳೆ ರಾಜ್ಯ ಸರ್ಕಾರವು ಮೀಸಲಾತಿಗಾಗಿ ಎರಡು ಹೊಸ ವರ್ಗಗಳನ್ನು ಘೋಷಿಸಿತ್ತು. ಮುಸ್ಲಿಮರ ಶೇ.4ರಷ್ಟು ಮೀಸಲಾತಿ ಕೋಟಾವನ್ನು ಪ್ರಬಲ ಜನಸಂಖ್ಯೆ ಮತ್ತು ರಾಜಕೀಯವಾಗಿ ಪ್ರಭಾವಿ ಸಮುದಾಯಗಳಾದ ಒಕ್ಕಲಿಗರು ಮತ್ತು ಲಿಂಗಾಯತರು ನಡುವೆ ತಲಾ ಶೇ.2ರಷ್ಟು ವಿಂಗಡಿಸಿ ಹಂಚಿಕೆ ಮಾಡಿತ್ತು. ಮುಸ್ಲಿಮರನ್ನು ಆರ್ಥಿಕವಾಗಿ ದುರ್ಬಲ ವರ್ಗಗಳ ಅಡಿಗೆ ಸೇರಿಸಲಾಗಿತ್ತು.
ಇದನ್ನೂ ಓದಿ: ಮುಸ್ಲಿಮರ 2ಬಿ ಮೀಸಲಾತಿ ರದ್ದು ಆದೇಶ ಪ್ರಶ್ನಿಸಿ ಹೈಕೋರ್ಟ್ಗೆ ಪಿಐಎಲ್ ಸಲ್ಲಿಕೆ