ನವದೆಹಲಿ: ಆಲ್ಟ್ ನ್ಯೂಸ್ ಸಹ-ಸಂಸ್ಥಾಪಕ ಮೊಹಮ್ಮದ್ ಝುಬೇರ್ ಅವರಿಗೆ ಸುಪ್ರೀಂಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ಉತ್ತರ ಪ್ರದೇಶದ ಸೀತಾಪುರದಲ್ಲಿ ಅವರ ವಿರುದ್ಧ ದಾಖಲಾದ ದೂರಿಗೆ ಸಂಬಂಧಿಸಿದಂತೆ ಈ ಜಾಮೀನು ನೀಡಲಾಗಿದೆ. ಅಲಹಾಬಾದ್ ಹೈಕೋರ್ಟ್ ಆದೇಶ ಪ್ರಶ್ನಿಸಿ ಝುಬೇರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಈ ಕುರಿತು ಉತ್ತರ ಪ್ರದೇಶ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದೆ.
ಝುಬೇರ್ ಅವರಿಗೆ 5 ದಿನಗಳ ಮಧ್ಯಂತರ ಜಾಮೀನು ನೀಡಲಾಗಿದ್ದು, ಅವರು ಈ ಅವಧಿಯಲ್ಲಿ ಸೀತಾಪುರ ನ್ಯಾಯಾಲಯ ವ್ಯಾಪ್ತಿಯಿಂದ ಹೊರಗೆ ಹೋಗಕೂಡದು ಹಾಗೂ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಹೊಸ ಟ್ವೀಟ್ ಮಾಡಕೂಡದು ಎಂಬ ಷರತ್ತುಗಳನ್ನು ನ್ಯಾಯಾಲಯ ವಿಧಿಸಿದೆ. ಅಲ್ಲದೆ, ಬೆಂಗಳೂರು ಸೇರಿದಂತೆ ಮತ್ತೆಲ್ಲಿಯೂ ಅವರು ಎಲೆಕ್ಟ್ರಾನಿಕ್ ಸಾಕ್ಷಿಗಳನ್ನು ನಾಶಪಡಿಸುವ ಕೃತ್ಯದಲ್ಲಿ ತೊಡಗಿಕೊಳ್ಳುವಂತಿಲ್ಲ ಎಂಬ ಷರತ್ತನ್ನು ಸಹ ಸುಪ್ರೀಂ ಕೋರ್ಟ್ ವಿಧಿಸಿದೆ.