ನವದೆಹಲಿ: ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ(PMLA) ಹಲವು ನಿಬಂಧನೆಗಳ ಸಾಂವಿಧಾನಿಕತೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್ ಇಂದು ಮಹತ್ವದ ತೀರ್ಪು ಹೊರಡಿಸಲಿದೆ. ತನಿಖಾಧಿಕಾರಿಗಳು, ಸಾಕ್ಷಿಗಳಿಗೆ ಸಮನ್ಸ್ ನೀಡುವುದು, ಜಾರಿ ನಿರ್ದೇಶನಾಲಯದಿಂದ ಆರೋಪಿಗಳ ಬಂಧನ ಮತ್ತು ವಶಪಡಿಸಿಕೊಳ್ಳುವಿಕೆ ಹಾಗೂ PMLA ಕಾನೂನಿನಡಿ ಜಾಮೀನು ಪ್ರಕ್ರಿಯೆಗೆ ಸಂಬಂಧಿಸಿದ ಹಲವು ಸಮಸ್ಯೆಗಳ ಕುರಿತು ತೀರ್ಪು ಬೆಳಕು ಚೆಲ್ಲುವ ನಿರೀಕ್ಷೆಯಿದೆ.
ರಾಜಕೀಯ ನಾಯಕರು, ಉದ್ಯಮಿಗಳು ಮತ್ತು ಇತರರು ಸೇರಿದಂತೆ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಬಂಧಿತರಾಗಿರುವ ಸೂಕ್ಷ್ಮ ಪ್ರಕರಣಗಳ ಮೇಲೆ ಈ ತೀರ್ಪು ಗಾಢ ಪ್ರಭಾವ ಬೀರಲಿದೆ. ಜೊತೆಗೆ, ಪ್ರಸ್ತುತ ಮತ್ತು ಭವಿಷ್ಯದಲ್ಲಿ ಇಡಿ ಮತ್ತು ಇತರೆ ತನಿಖಾ ಸಂಸ್ಥೆಗಳ ಕಾರ್ಯವ್ಯಾಪ್ತಿಯನ್ನೂ ಕೋರ್ಟ್ ಸ್ಪಷ್ಟಪಡಿಸಲಿದೆ.
ಸದ್ಯ ಕಟ್ಟುನಿಟ್ಟಾದ ಕಾನೂನಿನಡಿಯಲ್ಲಿ ಬಂಧನ ಅಧಿಕಾರ, ಜಾಮೀನು ನೀಡುವುದು, ಆಸ್ತಿ ವಶಪಡಿಸಿಕೊಳ್ಳುವುದು ಅಪರಾಧ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ವ್ಯಾಪ್ತಿಯಿಂದ ಹೊರಗಿದೆ. ಆದ್ರೆ, ತನಿಖಾ ಸಂಸ್ಥೆಗಳು ಪೊಲೀಸ್ ಅಧಿಕಾರವನ್ನು ಚಲಾಯಿಸುತ್ತಿರುವ ರೀತಿಯನ್ನು ಅರ್ಜಿದಾರರು ಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.
"ತನಿಖೆ ಪ್ರಾರಂಭಿಸುವುದು, ಸಾಕ್ಷಿಗಳು ಅಥವಾ ಆರೋಪಿಗಳನ್ನು ವಿಚಾರಣೆಗೆ ಕರೆಸುವುದು, ಹೇಳಿಕೆಗಳನ್ನು ದಾಖಲಿಸುವುದು, ಆಸ್ತಿ ವಶಪಡಿಸಿಕೊಳ್ಳುವ ಪ್ರಕ್ರಿಯೆಯು ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ" ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದಾರೆ.
ಆದಾಗ್ಯೂ, ಈ ಕಾಯ್ದೆಯನ್ನು ಸರ್ಕಾರ ಸಮರ್ಥಿಸಿಕೊಂಡಿದೆ. ಇದು ವಿಶೇಷ ಕಾನೂನು ಮತ್ತು ಅದರಲ್ಲಿ ತನ್ನದೇ ಆದ ಕಾರ್ಯವಿಧಾನಗಳು ಮತ್ತು ಸುರಕ್ಷತೆಗಳನ್ನು ಹೊಂದಿದೆ. ಅಕ್ರಮ ಹಣ ವರ್ಗಾವಣೆಯು ದೇಶದ ಆರ್ಥಿಕ ಶಕ್ತಿಗೆ ಗಂಭೀರ ಬೆದರಿಕೆಯಾಗಿದೆ. ಈ ಕಾಯ್ದೆಯ ಮೂಲಕ ಅಕ್ರಮಗಳಿಗೆ ಕಠಿಣ ಹಾಕಲು ಪ್ರಯತ್ನಿಸಲಾಗುತ್ತಿದೆ ಎಂದು ಕೋರ್ಟ್‌ಗೆ ತಿಳಿಸಿದೆ.
ಸೋಮವಾರ ಲೋಕಸಭೆ ಕಲಾಪದಲ್ಲಿ ಕೇಂದ್ರ ಸರ್ಕಾರ ನೀಡಿದ ಮಾಹಿತಿ ಪ್ರಕಾರ, ಮಾರ್ಚ್ 31, 2022 ರವರೆಗೆ ಇಡಿಯು ಪಿಎಂಎಲ್‌ಎ ಅಡಿಯಲ್ಲಿ 5,422 ಪ್ರಕರಣಗಳನ್ನು ದಾಖಲಿಸಿದೆ. 992 ಪ್ರಕರಣಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದೆ. 869.31 ಕೋಟಿ ರೂ. ಜಪ್ತಿ ಮಾಡಸಿಕೊಳ್ಳಲಾಗಿದ್ದು, 23 ಮಂದಿ ಆರೋಪಿಗಳಿಗೆ ಶಿಕ್ಷೆಯಾಗಿದೆ.
ಇದನ್ನೂ ಓದಿ: ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ : ಪ್ರಿಯಾಂಕಾ ಗಾಂಧಿ