ನವದೆಹಲಿ: 'ವೈವಾಹಿಕ ಅತ್ಯಾಚಾರ'ವನ್ನು ಅಪರಾಧಗಳ ವ್ಯಾಪ್ತಿಗೆ ತರಬೇಕೇ ಎಂಬ ಪ್ರಶ್ನೆಗೆ ಫೆಬ್ರವರಿ 15ರೊಳಗೆ ತಮ್ಮ ಉತ್ತರ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಮಾರ್ಚ್ 14ರಿಂದ ಈ ಪ್ರಕರಣದ ಅಂತಿಮ ವಿಚಾರಣೆಯನ್ನು ನ್ಯಾಯಾಲಯ ಕೈಗೆತ್ತಿಕೊಳ್ಳಲಿದೆ. ಮಾರ್ಚ್ 3ರೊಳಗೆ ಎಲ್ಲ ಕಕ್ಷಿದಾರರು ಲಿಖಿತ ಉತ್ತರ ಸಲ್ಲಿಸಬೇಕು ಎಂದು ಕೋರ್ಟ್ ಹೇಳಿದೆ. ವಿಚಾರಣೆ ಸಂದರ್ಭದಲ್ಲಿ ಕೇಂದ್ರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹಾಜರಾಗಿ, 'ಈ ವಿಷಯವು ಸಾಮಾಜಿಕವಾಗಿ ದೊಡ್ಡ ಪರಿಣಾಮ ಬೀರುತ್ತದೆ. ನಾವು ಕೆಲವು ತಿಂಗಳ ಹಿಂದೆ ಎಲ್ಲಾ ಮಧ್ಯಸ್ಥಗಾರರಿಂದ ಅಭಿಪ್ರಾಯಗಳನ್ನು ಕೇಳಿದ್ದೇವೆ. ಈ ವಿಷಯದಲ್ಲಿ ನಾವು ಉತ್ತರ ಸಲ್ಲಿಸುತ್ತೇವೆ' ಎಂದು ಹೇಳಿದರು.
ದೆಹಲಿ ಹೈಕೋರ್ಟ್ ವಿಭಿನ್ನ ತೀರ್ಪು: ಪತ್ನಿಯೊಂದಿಗಿನ ಬಲವಂತದ ಲೈಂಗಿಕತೆಗೆ ವಿನಾಯಿತಿ ನೀಡುವ ಭಾರತೀಯ ದಂಡ ಸಂಹಿತೆ ಸೆಕ್ಷನ್ 375 ಅನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಗಳ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, 2022 ಮೇ 11ರಂದು ವಿಭಿನ್ನ ತೀರ್ಪು ನೀಡಿತ್ತು. ವೈವಾಹಿಕ ಅತ್ಯಾಚಾರ ಅಪರಾಧೀಕರಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ರಾಜೀವ್ ಶಕ್ದರ್ ಮತ್ತು ಜಸ್ಟಿಸ್ ಹರಿ ಶಂಕರ್ ಅವರಿದ್ದ ಪೀಠ ಅರ್ಜಿ ವಿಚಾರಣೆ ನಡೆಸಿತ್ತು. ಈ ಸಂದರ್ಭದಲ್ಲಿ, ವೈವಾಹಿಕ ಅತ್ಯಾಚಾರ ಸಂವಿಧಾನವನ್ನು ಉಲ್ಲಂಘಿಸುವುದಿಲ್ಲ ಎಂದು ನ್ಯಾ.ಹರಿ ಶಂಕರ್ ಅಭಿಪ್ರಾಯಪಟ್ಟಿದ್ದರು. ಆದ್ರೆ ನ್ಯಾ.ರಾಜೀವ್ ಶಕ್ಧರ್ ಅವರು, ವೈವಾಹಿಕ ಅತ್ಯಾಚಾರ ವಿನಾಯಿತಿಯನ್ನು ರದ್ದುಗೊಳಿಸುವ ಬಗ್ಗೆ ಒಲವು ತೋರಿದ್ದರು.
ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಪೀಠ, ಅತ್ಯಾಚಾರ ಕಾನೂನಿನಡಿಯಲ್ಲಿ ಗಂಡಂದಿರಿಗೆ ನೀಡಲಾದ ವಿನಾಯಿತಿಯನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳ ಕುರಿತು ತೀರ್ಪು ಕಾಯ್ದಿರಿಸಿತ್ತು. ಬಳಿಕ, ತೀರ್ಪು ನೀಡಿ, ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಕಕ್ಷಿದಾರರಿಗೆ ಅನುಮತಿ ನೀಡಿತ್ತು. ನ್ಯಾಯಮೂರ್ತಿಗಳು ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ ಕಾರಣ ವೈವಾಹಿಕ ಅತ್ಯಾಚಾರ ಸಂಬಂಧಿಸಿದ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.
ಐಪಿಸಿ ಸೆಕ್ಷನ್ 375: ಐಪಿಸಿ 375 (ಅತ್ಯಾಚಾರ) ಅಡಿಯಲ್ಲಿ ವೈವಾಹಿಕ ಅತ್ಯಾಚಾರ ವಿನಾಯಿತಿಯ ಸಾಂವಿಧಾನಿಕತೆಯನ್ನು ಪ್ರಶ್ನಿಸಲಾಗಿತ್ತು. ಈ ಕಲಂ ತಮ್ಮ ಪತಿಯಿಂದ ಲೈಂಗಿಕವಾಗಿ ದೌರ್ಜನ್ಯಕ್ಕೊಳಗಾದ ವಿವಾಹಿತ ಮಹಿಳೆಯರ ವಿರುದ್ಧ ತಾರತಮ್ಯ ಹೊಂದಿದೆ. ಐಪಿಸಿಯ ಸೆಕ್ಷನ್ 375ರಲ್ಲಿ ನೀಡಿರುವ ವಿನಾಯಿತಿಯ ಅಡಿಯಲ್ಲಿ, ಪುರುಷನು ತನ್ನ ಹೆಂಡತಿಯೊಂದಿಗೆ ಲೈಂಗಿಕ ಸಂಭೋಗ ಅಥವಾ ಲೈಂಗಿಕ ಕ್ರಿಯೆಗಳನ್ನು ನಡೆಸುವುದು, ಹೆಂಡತಿ ಅಪ್ರಾಪ್ತಳಲ್ಲದಿರುವುದು ಅತ್ಯಾಚಾರವಲ್ಲ ಎಂಬುದು ಸರಿಯಲ್ಲ ಎಂದು ಪ್ರಶ್ನಿಸಲಾಗಿತ್ತು.
ಭಾರತೀಯ ಅತ್ಯಾಚಾರ ಕಾನೂನಿನಡಿ ಗಂಡಂದಿರಿಗೆ ನೀಡಿರುವ ವಿನಾಯಿತಿಯನ್ನು ರದ್ದುಗೊಳಿಸುವಂತೆ ಕೋರಿ ಎನ್‌ಜಿಒಗಳಾದ ಆರ್‌ಐಟಿ ಫೌಂಡೇಶನ್, ಆಲ್ ಇಂಡಿಯಾ ಡೆಮಾಕ್ರಟಿಕ್ ವುಮೆನ್ಸ್ ಅಸೋಸಿಯೇಷನ್ ಸಲ್ಲಿಸಿದ ಪಿಐಎಲ್‌ಗಳ ಮೇಲೆ ನ್ಯಾಯಾಲಯದ ತೀರ್ಪು ಹೊರಬಂದಿತ್ತು. 2017ರ ಅಫಿಡವಿಟ್‌ನಲ್ಲಿ, ವೈವಾಹಿಕ ಅತ್ಯಾಚಾರವನ್ನು ಕ್ರಿಮಿನಲ್ ಅಪರಾಧವನ್ನಾಗಿ ಮಾಡಲಾಗುವುದಿಲ್ಲ ಎಂದು ಕೇಂದ್ರವು ತನ್ನ ಅಫಿಡವಿಟ್‌ನಲ್ಲಿ ಹೇಳಿತ್ತು. ಈಗ ಸುಪ್ರೀಂ ಕೋರ್ಟ್ ವೈವಾಹಿಕ ಅತ್ಯಾಚಾರವನ್ನು ಅಪರಾಧದ ವ್ಯಾಪ್ತಿಗೆ ತರಬೇಕೇ ಎಂಬ ಪ್ರಶ್ನೆಗೆ ಉತ್ತರಿಸುವಂತೆ ಕೇಂದ್ರಕ್ಕೆ ಸೂಚಿಸಿದೆ.