ಕೋಲ್ಕತಾ, ಪಶ್ಚಿಮ ಬಂಗಾಳ : ತೌಕ್ತೆ ಚಂಡಮಾರುತದಿಂದ ಈಗಾಗಲೇ ದೇಶದ ಪಶ್ಚಿಮ ಕರಾವಳಿ ಸಾಕಷ್ಟು ಹಾನಿಗೆ ಒಳಗಾಗಿದೆ. ಈ ಬೆನ್ನಲ್ಲೇ ಮೇ 23 ಮತ್ತು ಮೇ 25 ನಡುವೆ ಪಶ್ಚಿಮ ಬಂಗಾಳದ ಸುಂದರ್ ಬನ್ ಪ್ರದೇಶದಲ್ಲಿ 'ಯಶ್' ಎಂಬ ಹೆಸರಿನ ಚಂಡಮಾರುತ ಅಪ್ಪಳಿಸಲಿದ್ದು, ಭೂಕುಸಿತ ಉಂಟಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಪಶ್ಚಿಮ ಬಂಗಾಳದ ಪ್ರಾದೇಶಿಕ ಹವಾಮಾನ ಇಲಾಖೆ ಈ ರೀತಿಯ ಮಾಹಿತಿ ನೀಡಿದ್ದು, ಸುಂದರ್ ಬನ್ ಮತ್ತು ಇತರ ಪ್ರದೇಶಗಳಲ್ಲಿ ಸಾಕಷ್ಟು ಹಾನಿಯಾಗುವ ಸಾಧ್ಯತೆಯಿದೆ. ನಂತರ ಬಾಂಗ್ಲಾದೇಶದ ಕಡೆಗೆ ಚಂಡಮಾರುತ ಸಾಗಬಹುದು ಎಂದು ಹೇಳಲಾಗುತ್ತಿದೆ.
ಒಮನ್ ರಾಷ್ಟ್ರ ಯಶ್ ಎಂಬ ಹೆಸರನ್ನು ನೀಡಿದ್ದು, ಕಳೆದ ವರ್ಷ ಮೇ ತಿಂಗಳಲ್ಲಿ ಕೋಲ್ಕತ್ತಾ ಮತ್ತು ಪೂರ್ವ ಕರಾವಳಿಯ ಪ್ರದೇಶಗಳನ್ನು ಧ್ವಂಸಗೊಳಿಸಿದ್ದ ಆಂಫಾನ್ ಚಂಡಮಾರುತಕ್ಕೆ ಈ ಯಶ್ ಚಂಡಮಾರುತ ಸಮನಾಗಿರಬಹುದೆಂದು ಊಹಿಸಲಾಗಿದೆ.
ಇದನ್ನೂ ಓದಿ: ಮುಂಬೈನಲ್ಲಿ ಈವರೆಗೆ 111 ಬ್ಲಾಕ್ ಫಂಗಸ್ ಪ್ರಕರಣಗಳು ಪತ್ತೆ
ಹವಾಮಾನ ಇಲಾಖೆಯು ದಿಕ್ಕಿನ ಮತ್ತು ಗಾಳಿಯ ವೇಗದ ಬಗ್ಗೆ ಖಚಿತವಾಗಿಲ್ಲ. ಮುಂದಿನ ಕೆಲವೇ ದಿನಗಳಲ್ಲಿ ಈ ಬಗ್ಗೆ ಗೊತ್ತಾಗಲಿದೆ. ಈ ಹಿನ್ನೆಲೆಯಲ್ಲಿ ಮೇ 23ರಂದು ಸಮುದ್ರಕ್ಕೆ ಹೋಗಬೇಡಿ ಎಂದು ಇಲಾಖೆ ಈಗಾಗಲೇ ಮೀನುಗಾರರಿಗೆ ಎಚ್ಚರಿಕೆ ನೀಡಿದೆ.
ಸಮುದ್ರದಲ್ಲಿ ಒತ್ತಡ ಕಡಿಮೆಯಾಗುತ್ತಿರುವ ಕಾರಣದಿಂದ ಕೋಲ್ಕತಾ, ದಕ್ಷಿಣ ಮತ್ತು ಉತ್ತರ 24 ಪರಗಣಗಳು ಸೇರಿದಂತೆ ಹಲವೆಡೆ ತಾಪಮಾನ ಹೆಚ್ಚುತ್ತಿದೆ. ಕಳೆದ 24 ಗಂಟೆಗಳಲ್ಲಿ ತಾಪಮಾನವು ಐದು ಡಿಗ್ರಿ ಹೆಚ್ಚಾಗಿದೆ ಮತ್ತು ಮುಂದಿನ ಒಂದೆರಡು ದಿನಗಳಲ್ಲಿ ಇದು 40 ಡಿಗ್ರಿಗಳನ್ನು ಮುಟ್ಟುವ ಸಾಧ್ಯತೆಯಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.