ನವದೆಹಲಿ: ಕೋವಿಡ್ ಲಾಕ್ಡೌನ್ನಿಂದಾಗಿ ಒಂದೊತ್ತಿನ ಅನ್ನಕ್ಕೂ ಪರದಾಡುತ್ತಿರುವ ರಾಷ್ಟ್ರ ರಾಜಧಾನಿಯ ವಲಸೆ ಕಾರ್ಮಿಕರಿಗೆ ನೆರವಾಗಲು ಬಾಲಿವುಡ್ ನಟಿ ಸನ್ನಿ ಲಿಯೋನ್ ಮುಂದಾಗಿದ್ದಾರೆ.
ದೆಹಲಿಯ 10,000 ವಲಸಿಗರಿಗೆ ಊಟದ ವ್ಯವಸ್ಥೆ ಮಾಡಲು ಪೆಟಾ ಸಂಸ್ಥೆ (PETA -ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್) ಜೊತೆ ನಟಿ ಕೈ ಜೋಡಿಸಿದ್ದಾರೆ. ಅಕ್ಕಿ-ಬೇಳೆಯಿಂದ ತಯಾರಿಸುವ ಖಿಚಡಿ ಹಾಗೂ ಹಣ್ಣುಗಳನ್ನು ಈ ಆಹಾರದ ಕಿಟ್ ಅನ್ನು ಒಳಗೊಂಡಿರುತ್ತದೆ. ಉದಯ್ ಫೌಂಡೇಶನ್ ಮೂಲಕ ಪೆಟಾ ಮತ್ತು ಸನ್ನಿ ಆಹಾರವನ್ನು ದಾನ ಮಾಡಲಿದ್ದಾರೆ.
ಇದನ್ನೂ ಓದಿ: ದೆಹಲಿಯ 72 ಲಕ್ಷ ಪಡಿತರ ಚೀಟಿದಾರರಿಗೆ ಮುಂದಿನ ಎರಡು ತಿಂಗಳು ರೇಷನ್ ಫ್ರೀ..!!
"ನಾವು ಬಿಕ್ಕಟ್ಟನ್ನು ಎದುರಿಸುತ್ತಿದ್ದೇವೆ, ಆದರೆ ಸಹಾನುಭೂತಿ ಮತ್ತು ಒಗ್ಗಟ್ಟಿನೊಂದಿಗೆ ನಾವು ಮುಂದೆ ಬರಬೇಕು. ಕೊರೊನಾದ ಸಮಯದಲ್ಲಿ ಅಗತ್ಯವಿರುವ ಸಾವಿರಾರು ಜನರಿಗೆ ಪ್ರೋಟೀನ್ಯುಕ್ತ ಸಸ್ಯಾಹಾರಿ ಊಟವನ್ನು ನೀಡಲು ಮತ್ತೆ ಪೆಟಾ ಇಂಡಿಯಾದೊಂದಿಗೆ ಕೈಜೋಡಿಸಲು ನನಗೆ ಸಂತೋಷವಾಗಿದೆ" ಎಂದು ಸನ್ನಿ ಲಿಯೋನ್ ಹೇಳಿದ್ದಾರೆ.
ಪೆಟಾ ಸಂಸ್ಥೆಯ ಅನೇಕ ಸಮಾಜಪರ ಅಭಿಯಾನಗಳಲ್ಲಿ ತೊಡಗಿದ್ದ ಸನ್ನಿ ಲಿಯೋನ್ರನ್ನು 2016 ರಲ್ಲಿ 'ಪೆಟಾ ಇಂಡಿಯಾಸ್ ಪರ್ಸನ್ ಆಫ್ ದಿ ಇಯರ್' ಎಂದು ಘೋಷಿಸಲಾಗಿತ್ತು.
ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ತೀವ್ರ ಏರಿಕೆಯಿಂದಾಗಿ ರಾಷ್ಟ್ರ ರಾಜಧಾನಿಯಲ್ಲಿ ಮೇ 10 ರವರೆಗೆ ಲಾಕ್‌ಡೌನ್ ವಿಸ್ತರಣೆಯಾಗಿದೆ.